ರಾಯಚೂರು: ಇಂದು ಮುಸ್ಲಿಂ ಬಾಂಧವರು ಖುಷಿಯಿಂದ ಆಚರಿಸುವ ರಂಜಾನ್ ಹಬ್ಬದ ಜೊತೆಗೆ ವಿಶ್ವ ಪರಿಸರ ದಿನವೂ ಹೌದು. ಹೀಗಾಗಿ ಈ ವಿಶೇಷ ದಿನದಂದು ರಾಯಚೂರಿನ ಜನತೆ ಸಸಿಗಳನ್ನು ನೆಟ್ಟು ರಂಜಾನ್ ಹಬ್ಬವನ್ನು ಸಂಭ್ರಮಿಸುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.
ದೇವದುರ್ಗದ ಜಾಲಹಳ್ಳಿಯಲ್ಲಿ ಸಸಿ ನೆಡುವ ಮೂಲಕ ಪವಿತ್ರ ರಂಜಾನ್ ಹಬ್ಬವನ್ನ ಆಚರಿಸಲಾಯಿತು. ಇಲ್ಲಿನ ಜಮೀಯಾ ಮಸೀದಿಯ ಮೌಲಾನ ಮುತ್ತಾಜ್ ರಾಹೀ ಅವರ ನೇತೃತ್ವದಲ್ಲಿ ಮುಸ್ಲಿಂ ಬಾಂಧವರು ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಯಾವ ರೀತಿ ಸಾಕಿ, ಸಾಲಹುತ್ತಾರೋ ಅದೇ ರೀತಿ ಮನೆಯ ಮುಂದೆ ಒಂದು ಗಿಡ ಬೆಳೆಸಬೇಕೆಂದು ನಿರ್ಧರಿಸಿದ್ದು, ಇಂದು ಸಾಂಕೇತಿಕವಾಗಿ ಸಸಿಗಳನ್ನ ನೆಟ್ಟು ಗಿಡ ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಕೇವಲ ಮುಸ್ಲಿಂ ಬಾಂಧವರಷ್ಟೇ ಅಲ್ಲದೆ ಹಿಂದೂಗಳು ಕೂಡ ಅವರ ಜೊತೆ ಕೈಜೋಡಿಸಿ ಪರಿಸರದ ಮೇಲಿರುವ ಕಾಳಜಿ ಮೆರೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಹಿಂದೂ-ಮುಸ್ಲಿಂ ಜೊತೆಗೂಡಿ ಪರಿಸರ ಕಾಳಜಿ ಮೆರೆದಿರುವುದು ವಿಶೇಷವಾಗಿತ್ತು.
ಪವಿತ್ರ ರಂಜಾನ್ ಆಚರಣೆ ಹಿನ್ನೆಲೆ ಮುಸ್ಲಿಂ ಬಾಂಧವರು ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆ ಹಿನ್ನೆಲೆ ಮೈದಾನ ಸುತ್ತ ಪೋಲಿಸ್ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಈ ವೇಳೆ ಪ್ರಾರ್ಥನೆಯಲ್ಲಿ ಜಿಲ್ಲಾಧಿಕಾರಿ ಬಿ.ಶರತ್, ಎಸ್‍ಪಿ ಡಿ.ಕಿಶೋರ್ ಬಾಬು ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದು, ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ರಂಜಾನ್ ಆಚರಿಸಲಾಗುತ್ತಿದೆ.



