– ಮುಸ್ಲಿಮರಿಗೆ ಇಫ್ತಾರ್ ಕೂಟ
ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಸದಾ ಶ್ರೀಕೃಷ್ಣನ ಪೂಜೆ-ಭಜನೆ ನಡೆಯುವ ಉಡುಪಿ ಮಠದಲ್ಲಿ ಶನಿವಾರ ರಂಜಾನ್ ಹಬ್ಬದ ಕಾರ್ಯಕ್ರಮ ನಡೆಯಿತು. ಒಂದು ತಿಂಗಳು ಉಪವಾಸ ಮಾಡಿದ್ದ ಮುಸ್ಲಿಮರು ಶ್ರೀಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳಿಂದ ಕರ್ಜೂರ ಪಡೆದು ತಿಂಗಳ ಉಪವಾಸಕ್ಕೆ ತೆರೆ ಎಳೆದರು.
ಉಡುಪಿ ಶ್ರೀಕೃಷ್ಣ ಮಠದಲ್ಲಿ 800 ವರ್ಷಗಳಿಂದ ನಿರಂತರ ಕೃಷ್ಣನ ಪೂಜೆ-ಭಜನೆ ಆರಾಧನೆ ನಡೆಯುತ್ತಾನೆ ಬಂದಿದೆ. ಆದ್ರೆ ಇಂದು ಕೃಷ್ಣನ ಪೂಜೆಯ ಜೊತೆ ಅಲ್ಲಾಹ್‍ನ ಆರಾಧನೆಯೂ ನಡೆಯಿತು. ರಂಜಾನ್ ತಿಂಗಳ ಉಪವಾಸ ಮುಗಿಸಿದ ಮುಸ್ಲಿಮರು ಕೃಷ್ಣಮಠದ ಅನ್ನಬ್ರಹ್ಮ ಛತ್ರದಲ್ಲಿ ಕೊನೆಯ ನಮಾಜ್ ಮಾಡಿ ಉಪವಾಸ ಅಂತ್ಯ ಮಾಡಿದರು. ಕೃಷ್ಣ ಮಠದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಮುಸ್ಲಿಮರಿಗಾಗಿ ಇಫ್ತಾರ್ ಕೂಟವನ್ನು ಪೇಜಾವರಶ್ರೀ ಆಯೋಜನೆ ಮಾಡಿದ್ದರು.
Advertisement
Advertisement
ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಹಿಂದೂ- ಮುಸಲ್ಮಾನರು ಸೌಹಾರ್ದವಾಗಿ ಬಾಳಬೇಕು, ಬದುಕಬೇಕು. ಆದ್ರೆ ಇತ್ತೀಚೆಗೆ ಹಿಂಸೆಯ ಮಾರ್ಗದಲ್ಲಿ ಸಮಾಜ ನಡೆಯುತ್ತಿದೆ. ಹೀಗಾಗಿ ಸೌಹಾರ್ದದ ಕಾರ್ಯಕ್ರಮವನ್ನು ಮಠದಲ್ಲಿ ಇಟ್ಟುಕೊಳ್ಳಲಾಗಿದೆ. ಮಂಗಳೂರು- ಕಾಸರಗೋಡು- ಭಟ್ಕಳದಲ್ಲಿ ನಡೆದ ಇಸ್ಲಾಂ ಸಮ್ಮೇಳನಗಳಲ್ಲಿ ಕರೆಸಿ ನನ್ನನ್ನು ಆತ್ಮೀಯತೆಯಿಂದ ನೋಡಿಕೊಂಡಿದ್ದಾರೆ. ಪರ್ಯಾಯ ಸಂದರ್ಭ ಹೊರೆಕಾಣಿಕೆ ನೀಡಿದ್ದರು. ಕೃಷ್ಣ ಮಠಕ್ಕೆ ಮುತ್ತಿಗೆ ಹಾಕಲು ಬರುತ್ತೇವೆ ಎಂದಾಗ ಅದಕ್ಕೆ ವಿರುದ್ಧ ನಿಂತವರಲ್ಲಿ ಮುಸ್ಲಿಮರೂ ಇದ್ದರು. ಹಿಂದೂಗಳಿಗೆ ಹಿಂಸೆಯಾದಾಗ ಮುಸ್ಲಿಮರು- ಮುಸ್ಲಿಮರಿಗೆ ಸಮಸ್ಯೆಯಾದಾಗ ಹಿಂದೂಗಳು ಸಹಾಯಕ್ಕೆ ಮುಂದಾಗಬೇಕು ಎಂದು ಕರೆ ನಿಡಿದರು. ಭಾರತ ಶಾಂತಿಯ- ಸೌಹಾರ್ದತೆಯ ತಾಣವಾಗಬೇಕು. ಕರಾವಳಿಯಲ್ಲಿ ಶಾಂತಿ ಬೆಳೆಯುವ-ಬೆಳೆಸುವ ಅಗತ್ಯವಿದೆ. ನಮಃ- ನಮಾಜ್ ಒಂದೇ ಎಂದು ಶ್ರೀಗಳು ಹೇಳಿದರು.
Advertisement
ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಉಪವಾಸವಿದ್ದ ಮುಸ್ಲಿಮರಿಗೆ ಕರ್ಜೂರ ನೀಡಿ ಉಪವಾಸ ಬಿಡಿಸಿದರು. ನಂತರ ಸ್ವತಃ ಸ್ವಾಮೀಜಿ ಫಲಾಹಾರವನ್ನ ಬಡಿಸಿದರು. ಅನ್ನಬ್ರಹ್ಮ ಛತ್ರದಲ್ಲಿ ಹಣ್ನು ಹಂಪಲು-ಸಮೋಸ ನೀಡಿ ಉಪವಾಸ ಬಿಡುವ ಕ್ರಮ ನಡೆಯಿತು. ಇದಾಗಿ ಎಲ್ಲಾ ಮುಸ್ಲಿಮರಿಗೆ ಛತ್ರದಲ್ಲೇ ಸಾಮೂಹಿಕ ನಮಾಜ್ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಛತ್ರದಲ್ಲೇ ಸಾಮೂಹಿಕ ನಮಾಜ್ ಮಾಡಿದ ಮುಸ್ಲಿಂ ಧರ್ಮೀಯರಿಗೆ ಆದೇಶ ಬಂದಿತ್ತು. ಕಾರವಾರ ಜಿಲ್ಲೆಯ ಭಟ್ಕಳದಲ್ಲಿ ಚಂದ್ರ ಕಾಣಿಸಿಕೊಂಡ ಕಾರಣ ನಾಳೆಯೇ ಈದುಲ್ ಫಿತ್ರ್ ಎಂದು ಖಾಜಿಯವರು ಘೋಷಿಸಿದ್ದಾರೆ. ಈ ಎರಡು ಸಂತಸಗಳು ಒಟ್ಟೊಟ್ಟಿಗೆ ಆದವು.
Advertisement
ಮುಸ್ಲಿಂ ಸಮುದಾಯದ ಮುಖಂಡ ರಹೀಂ ಉಚ್ಚಿಲ ಮಾತನಾಡಿ, ಪೇಜಾವರಶ್ರೀ ಇಡೀ ವಿಶ್ವಕ್ಕೆ ಸ್ವಾಮೀಜಿ, ಇದು ಉಡುಪಿ ಕೃಷ್ಣಮಠದಿಂದ ವಿಶ್ವಕ್ಕೆ ಸಂದೇಶ ರವಾನೆಯಾಗಿದೆ. ಇಂದಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಇಫ್ತಾರ್‍ಗಳಿಗೆ ರಾಜಕೀಯ ಬಣ್ಣ ಬರುತ್ತಿದೆ. ಆದ್ರೆ ಮಠದಲ್ಲಿ ನಡೆದ ಇಫ್ತಾರ್ ವಿಭಿನ್ನ. ಮಾನವ ಜನಾಂಗ ಬೆಸೆಯುವ ಕೆಲಸ ಉಡುಪಿ ಮಠದಲ್ಲಿ ಆಗಿದೆ. ಸ್ವಾಮೀಜಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ದೇಶ ಮೂಲೆ ಮೂಲೆಗೆ ಇಂತಹ ಶಾಂತಿ ಸಂದೇಶ ತಲುಪಬೇಕು. ರಂಜಾನ್ ತಿಂಗಳ ಉಪವಾಸದ ಕೊನೆಯ ಉಪವಾಸವನ್ನು ಮಠದಲ್ಲಿ ಬಿಟ್ಟಿದ್ದೇವೆ ಎಂಬೂದು ದೈವೇಚ್ಛೆ. ಸಮಸ್ತ ಮುಸಲ್ಮಾನ ಸಮುದಾಯದಿಂದ ಪೇಜಾವರ ಮಠಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ದಲಿತ ಕೇರಿಗೆ ಭೇಟಿ ಕೊಡುವುದನ್ನು ಆರಂಭಿಸಿದ ಪೇಜಾವರಶ್ರೀಗೆ ತಮ್ಮದೇ ಸಮಾಜದಲ್ಲಿ ವಿರೋಧ ವ್ಯಕ್ತವಾಗಿತ್ತು. ಆದ್ರೆ ಹಿರಿಯ ಗುರುಗಳು ಅಂತ ಯಾರೂ ಬಹಿರಂಗವಾಗಿ ಈ ಬಗ್ಗೆ ಚಕಾರ ಎತ್ತಲ್ಲ. ಇದೀಗ ಪೇಜಾವರಶ್ರೀಗಳು ಕೃಷ್ಣಮಠದಲ್ಲೇ ಇಫ್ತಾರ್ ಕೂಟ ಏರ್ಪಡಿಸಿದ್ದಾರೆ. ಈ ಬಗ್ಗೆ ಹಿಂದೂ-ಮುಸ್ಲಿಂ ಸಮುದಾಯದಲ್ಲಿ ಏನೆಲ್ಲಾ ಅಭಿಪ್ರಾಯ ಬರುತ್ತೋ,..!? ಪ್ರಗತಿಪರರು ಈ ಬಗ್ಗೆ ಏನೆಂದು ಟೀಕಿಸುತ್ತಾರೋ ಎಂಬ ಕುತೂಹಲವಿದೆ.