ಬೆಂಗಳೂರು: ರಾಷ್ಟ್ರೀಯ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಸಂಸದೆ ರಮ್ಯಾ ಸದ್ಯದಲ್ಲೇ ರಾಜ್ಯ ರಾಜಕಾರಣ ವಾಪಸ್ ಬರುತ್ತಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.
ರಾಷ್ಟ್ರ ರಾಜಕಾರಣದಲ್ಲಿ ಬ್ಯುಸಿಯಾಗಿರುವ ರಮ್ಯಾ ಗೆ ವಿಧಾನಸಭೆ ಹೊಸ್ತಿಲಲ್ಲಿರುವ ಕರ್ನಾಟಕದ ಕೆಪಿಸಿಸಿ ಕಾರ್ಯಕಾರಣಿ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ. ಸೋಮವಾರ ಬಿಡುಗಡೆ ಮಾಡಲಾದ 94 ನೂತನ ಕಾರ್ಯಕಾರಣಿ ಸದಸ್ಯರ ಪಟ್ಟಿಯಲ್ಲಿ ರಮ್ಯಾ ಅವರಿಗೂ ಸ್ಥಾನ ನೀಡಲಾಗಿದ್ದು ಮಂಡ್ಯ ಜಿಲ್ಲೆಯಿಂದ ಅವರನ್ನು ಆಯ್ಕೆ ಮಾಡಲಾಗಿದೆ.
Advertisement
ಕಾರ್ಯಕರಣಿ ಸಮಿತಿಯಲ್ಲಿ ಸ್ಥಾನ ಪಡೆದ ಹಿನ್ನೆಲೆಯಲ್ಲಿ ರಮ್ಯಾ ಅವರು ಮತ್ತೆ ರಾಜ್ಯ ರಾಜಕಾರಕ್ಕೆ ವಾಪಸ್ ಆಗ್ತಾರಾ? 2023ರಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಆಗ್ತಾರಾ ಎನ್ನುವ ಪ್ರಶ್ನೆಗಳು ಈಗ ಎದ್ದಿದೆ.
Advertisement
Advertisement
ಪವರ್‍ಫುಲ್ ಮಹಿಳೆ:
ರಮ್ಯಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗುವ ಮೊದಲು ಎಐಸಿಸಿ ಜಾಲತಾಣಗಳು ಅಷ್ಟೊಂದು ಸಕ್ರಿಯವಾಗಿರಲಿಲ್ಲ. ಆದರೆ ಈಗ ಫುಲ್ ಆಕ್ಟೀವ್ ಆಗಿದ್ದು, ಮೋದಿ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ನಡೆಸುವ ಟೀಕೆಗಳು ಈಗ ದೇಶದಲ್ಲಿ ಟ್ರೆಂಡಿಗ್ ಟಾಪಿಕ್ ಆಗುತ್ತಿವೆ. ಹೀಗಾಗಿ ದೆಹಲಿಯಲ್ಲಿ ರಮ್ಯಾ ಮಾಡುತ್ತಿರುವ ಕಾರ್ಯಗಳು ಸದ್ದಾಗುತ್ತಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ಸೂಕ್ತ ಸಮಯದಲ್ಲಿ ಬಹುಮಾನ ನೀಡುವುದು ಗ್ಯಾರಂಟಿ. ಆ ಸಪ್ರ್ರೈಸ್ ಗಿಫ್ಟು ಯಾವುದು ಅನ್ನೋದು ಸದ್ಯಕ್ಕೆ ಹೇಳಲಾಗದೇ ಇದ್ದರೂ ರಮ್ಯಾ ಭವಿಷ್ಯ ಖಚಿತವಾಗಿ ಪ್ರಜ್ವಲ ಉಜ್ವಲ.
Advertisement
ರಮ್ಯಾ ಬೆಳವಣಿಗೆ ಗಮನಿಸಿದ್ರೆ ಅದೂ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 2023 ಅಥವಾ 2028ಕ್ಕೆ ಮುಖ್ಯಮಂತ್ರಿ ಯೋಗ ಒಲಿದು ಬಂದ್ರೂ ಅಚ್ಚರಿ ಇಲ್ಲ. ಸದ್ಯದ ಪರಿಸ್ಥಿತಿ ಗಮನಿಸಿದ್ರೆ ನಿಧಾನವಾಗಿ ರಮ್ಯಾ ರಾಜಕೀಯ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಅಷ್ಟೇ ಅಲ್ಲದೇ ವಿದೇಶದಲ್ಲಿ ರಾಜಕೀಯವನ್ನು ಓದಿದ್ದಾರೆ. ಈಗ ಕಾಂಗ್ರೆಸ್ ಹೈಕಮಾಂಡ್ ಗೆ ಹತ್ತಿರವಾಗುತ್ತಿದ್ದು, ನಿಷ್ಟಾವಂತರನ್ನು ಎಂದೂ ಕೈಬಿಡದ ಕಾಂಗ್ರೆಸ್ ಭವಿಷ್ಯದಲ್ಲಿ ರಮ್ಯಾಗೆ ಬಂಪರ್ ರಿಟರ್ನ್ ಗಿಫ್ಟ್ ಕೊಡಲಿದೆ ಅನ್ನೋದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಇದಕ್ಕೆ ಪೂರಕ ಎಂಬಂತೆ ಕಾಂಗ್ರೆಸ್ ಈಗ ಕರ್ನಾಟಕದ ಕೆಪಿಸಿಸಿ ಕಾರ್ಯಕಾರಣಿ ಸಮಿತಿಯಲ್ಲಿ ಸ್ಥಾನ ನೀಡಿರುವುದು ಮೇಲಿನ ವಿಶ್ಲೇಷಣೆಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ಹೇಗಾಗ್ತಾರೆ ಸಿಎಂ.?
ರಾಜ್ಯ ಕಾಂಗ್ರೆಸ್ ನಲ್ಲಿ ಚರಿಷ್ಮಾ ಇರೋ ಮಹಿಳಾ ನಾಯಕಿಯರ ಕೊರತೆಯಿದೆ. ಈ ಖಾಲಿ ಜಾಗವನ್ನು ತುಂಬುವ ತಾಕತ್ತು ರಮ್ಯಾಗಿದೆ. ರಮ್ಯಾ ನಡೆ ನುಡಿ, ಹಾವಭಾವ ಎಲ್ಲವೂ ಕ್ಲಾಸ್, ಇದರ ಜೊತೆ ಮಾಸ್ ಸೆಳೆಯೋ ಶಕ್ತಿ ರಮ್ಯಾಗಿದೆ. ಹೀಗಾಗಿ ವೋಟ್ ಬ್ಯಾಂಕ್ ರಾಜಕೀಯದಲ್ಲೂ ಛಾಪು ಮೂಡಿಸಬಲ್ಲರು ಎನ್ನುವ ಅಭಿಪ್ರಾಯ ಕೇಳಿಬಂದಿದೆ.
ಸ್ಯಾಂಡಲ್‍ವುಡ್ ನಟಿಯಾಗಿದ್ದ ಕಾರಣ ರಮ್ಯಾಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಅಷ್ಟೇ ಅಲ್ಲದೇ ಸ್ತ್ರೀ ಅಭಿಮಾನಿಗಳ ಸಂಖ್ಯೆಯೂ ಜಾಸ್ತಿಯಿದೆ. ಹೆಣ್ಣುಮಕ್ಕಳ ಪ್ರತಿನಿಧಿಯಾಗಿ ರಮ್ಯಾ ನಿಲ್ಲುತ್ತಾರೆ ಎನ್ನುವುದು ಕೂಡ ಸಕಾರಾತ್ಮಕ ಅಂಶವಾಗಿದೆ. ರಮ್ಯಾ ಅವರು ಹೈಕಮಾಂಡ್ ಮನ ಗೆದ್ದಾಗಿದೆ. ಇನ್ನು ರಾಜ್ಯದ ನಾಯಕರು ಅದೆಷ್ಟೇ ಬೊಬ್ಬೆ ಹಾಕಿದರೂ ರಮ್ಯಾ ಅವರಿಗೆ ಸಿಗಲಿರುವ ಸ್ಥಾನಮಾನವನ್ನು ತಪ್ಪಿಸಲಾಗದು. ಕಾಂಗ್ರೆಸ್ ನಲ್ಲಿ ಹೈಕಮಾಂಡ್ ತಥಾಸ್ತು ಅಂದ್ರೆ ಉಳಿದೆಲ್ಲವೂ ನಗಣ್ಯ. ರಮ್ಯಾಗೆ ಏನ್ಗೊತ್ತು ಆಡಳಿತ ಅಂತ ಹಲವರು ಚಕಾರ ಎತ್ತಬಹುದು. ಆದ್ರೆ ಅವಕಾಶ ಕೊಟ್ರೆ ತಾನೇ ಅನುಭವ ಸಿದ್ಧಿಸುವುದು ಎನ್ನುವುದು ಕೆಲವರ ಒಪ್ಪಲರ್ಹ ವಾದ. ಹೀಗಾಗಿ ಮೊದಲು ಮಂತ್ರಿಗಿರಿ ಸಿಕ್ಕಿ, ಬಳಿಕ ದೊಡ್ಡ ಹುದ್ದೆ ಸಿಗಬಹುದು ಎನ್ನುವ ಮಾತನ್ನು ಅಲ್ಲಗೆಳೆಯುಂತಿಲ್ಲ.
ಪ್ರತಿಭೆ ಇದ್ರೆ ಮಂತ್ರಿಯಾಗ್ತಾರೆ:
ಭಾರತದಲ್ಲಿ ಸ್ವಲ್ಪ ರಾಜಕೀಯ ಅನುಭವ ಇದ್ದರೆ ಯಾರು ಬೇಕಾದರೂ ಮಂತ್ರಿಯಾಗಬಹುದು, ಮುಖ್ಯಮಂತ್ರಿಯಾಗಬಹುದು. ದಿವಂಗತ ಜಯಲಲಿತಾ ಇದಕ್ಕೆ ತಕ್ಕ ಉದಾಹರಣೆ. ರಾಜ್ಯಸಭಾ ಸದಸ್ಯೆಯಾಗಿರುವ ಸ್ಮೃತಿ ಇರಾನಿ ಅವರನ್ನು ರಾಹುಲ್ ಗಾಂಧಿ ವಿರುದ್ಧ ಕಣಕ್ಕೆ ಇಳಿಸಿದ ಬಿಜೆಪಿ ಚುನಾವಣೆಯಲ್ಲಿ ಸೋತರೂ ಸಾಮರ್ಥ್ಯದ ಹಿನ್ನೆಲೆಯಲ್ಲಿ ಮೋದಿ ಕ್ಯಾಬಿನೆಟ್ ನಲ್ಲಿ ಮಂತ್ರಿ ಸ್ಥಾನ ಪಡೆದಿದ್ದಾರೆ. ಇನ್ನು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಆಯ್ಕೆ ಆಗುತ್ತಾರೆ ಎಂದು ಬಿಜೆಪಿ ನಾಯಕರೇ ಊಹಿಸಿರಲಿಲ್ಲ. ರಾಜಕೀಯದಲ್ಲಿ ಯಾರು ಬೇಕಾದರೂ ಮಂತ್ರಿಯಾಗಬಹುದು ಎನ್ನುವ ಮಾತುಗಳು ಈಗಾಗಲೇ ಜನಪ್ರಿಯವಾಗಿರುವ ಕಾರಣ ಮುಂದೊಮ್ಮೆ ಕರ್ನಾಟಕದಲ್ಲಿ ಕಾಂಗ್ರೆಸ್ ಬಹುಮತ ಪಡೆದಲ್ಲಿ ರಮ್ಯಾ ಅವರನ್ನು ಅಚ್ಚರಿ ಎಂಬಂತೆ ಸಿಎಂ ಆಗಿ ಆಯ್ಕೆ ಮಾಡಬಹುದು ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿದೆ.