ಬೆಂಗಳೂರು: ಮಾಜಿ ಸಂಸದೆ ಹಾಗೂ ನಟಿ ರಮ್ಯಾ ರಾಜ್ಯ ರಾಜಕಾರಣಕ್ಕೆ ಪ್ರವೇಶ ಮಾಡುವ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ರಮ್ಯಾ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರವನ್ನು ಎಲ್ಲೂ ಹೇಳಿಲ್ಲ ಎಂದು ತಿಳಿಸಿದ್ದಾರೆ.
ರಮ್ಯಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಎಲ್ಲೂ ಹೇಳಿಕೆ ನೀಡಿಲ್ಲ, ನಾವು ಹೇಳಿಲ್ಲ. ರಮ್ಯಾ ಯಾರ ಸಂಪರ್ಕದಲ್ಲಿ ಇದ್ದಾರೋ, ಇಲ್ವೋ ಎಂಬುವುದು ತಿಳಿದಿಲ್ಲ. ಅವರ ಹುಟ್ಟು ಹಬ್ಬದ ದಿನದಂದು ಅವರಿಗೆ ಕರೆ ಮಾಡಿ ಶುಭಾಶಯ ಹೇಳಿದ್ದೆ ಎಂದು ತಿಳಿಸಿದ್ದಾರೆ.
ಇನ್ನು 2018 ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಯಾತ್ರೆ ಕೈಗೊಳ್ಳುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಪಕ್ಷದವರು ಯಾತ್ರೆ ಮಾಡಿದ ತಕ್ಷಣ ನಾವು ಏಕೆ ಯಾತ್ರೆ ಮಾಡಬೇಕು. ಯಾತ್ರೆ ಮಾಡಿದ ತಕ್ಷಣ ಚುನಾವಣೆಗೆ ತಯಾರಿ ಅಂತ ಏನಿಲ್ಲ. ನಾವು ನಮ್ಮದೇ ರಣತಂತ್ರ ಹೊಂದಿದ್ದೇವೆ. ಈಗಾಗಲೇ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಲು ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ನಾನು ಕೊರಟಗೆರೆಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ ಪರಮೇಶ್ವರ್ ಒಂದು ಕುಟುಂಬದಲ್ಲಿ ಹಲವರಿಗೆ ಟಿಕೆಟ್ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಕೋಪಗೊಂಡರು. ಚುನಾವಣೆಯಲ್ಲಿ ಮೂರು ಬಾರಿ ಪರಾಭವಗೊಂಡವರಿಗೆ ಹಾಗೂ ಒಂದು ಕುಟುಂಬದಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕು ಎನ್ನುವ ನಿಯಮ ಇದೆ. ಆದರೆ ಇದು ಜಾರಿಯಾಗಿಲ್ಲ. ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಹೈಕಮಾಂಡ್ ಹೇಗೆ ನಿಯಮ ರೂಪಿಸುತ್ತದೋ ಅದರ ಅನ್ವಯ ಟಿಕೆಟ್ ನೀಡಲಾಗುತ್ತದೆ ಎಂದರು. ಚನ್ನಪಟ್ಟಣದಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಒಳ ಒಪ್ಪಂದ ವಿಚಾರ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಣಕ್ಕೆ ಇಳಿಸುತ್ತೇವೆ ಎಂದರು.
ರಮ್ಯಾ ಅವರು ಸಂಸದರಾಗಿ ಆಯ್ಕೆಯಾದ ಕಡಿಮೆ ಅವಧಿಯಲ್ಲಿ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಮಂಡ್ಯದ ಕಾಂಗ್ರೆಸ್ ಅಭಿಮಾನಿಗಳು ಮನವಿ ಮಾಡಿದ್ದರು.