Connect with us

Districts

ಅಪ್ಪಾಜಿ, ಇಂದಿರಾ ಆಯ್ತು, ಮಂಡ್ಯದಲ್ಲಿ ಶುರುವಾಗ್ತಿದೆ ರಮ್ಯಾ ಕ್ಯಾಂಟೀನ್

Published

on

Share this

ಮಂಡ್ಯ: ರಾಜ್ಯದಲ್ಲಿ ಈಗ ಕ್ಯಾಂಟೀನ್ ಭಾಗ್ಯಗಳ ಸರಮಾಲೆಯೇ ಶುರುವಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ಇಂದಿರಾ ಕ್ಯಾಂಟೀನ್ ಶುರುವಾಗುತ್ತೆ ಎಂದು ಗೊತ್ತಾದ ಬೆನ್ನಲ್ಲೇ ಜೆಡಿಎಸ್ ಶಾಸಕ ಶರವಣ ಅವರು ಅಪ್ಪಾಜಿ ಕ್ಯಾಂಟೀನ್ ಆರಂಭಿಸಿದ್ದರು. ಈ ನಡುವೆ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೆಸರಲ್ಲಿ ಸ್ವಾಮಿ ಕ್ಯಾಂಟೀನ್ ಕೂಡಾ ಶುರುವಾಯ್ತು. ಇದಕ್ಕೀಗ ಮತ್ತೊಂದು ಸೇರ್ಪಡೆ ರಮ್ಯಾ ಕ್ಯಾಂಟೀನ್.

ಹೌದು, ಮೋಹಕ ತಾರೆ, ಮಂಡ್ಯದ ಮಾಜಿ ಸಂಸದೆ ರಮ್ಯಾ ಮೇಲಿನ ಅಭಿಮಾನಕ್ಕಾಗಿ, ಅಭಿಮಾನಿಯೊಬ್ಬರು ಮಂಡ್ಯದ ಜನರಿಗೆ ಭಾನುವಾರ ಬೆಳಗ್ಗೆಯಿಂದ ಕ್ಯಾಂಟೀನ್ ಶುರು ಮಾಡಲಿದ್ದಾರೆ. ರಮ್ಯಾ ಕ್ಯಾಂಟೀನ್ ಆರಂಭ ಮಾಡುತ್ತಿರುವ ಅಭಿಮಾನಿ ಹೆಸರು ರಘು. ಕಳೆದ 15 ವರ್ಷಗಳಿಂದ ಮಂಡ್ಯದಲ್ಲಿ ರಸ್ತೆ ಬದಿ ಕ್ಯಾಂಟೀನ್ ನಡೆಸುತ್ತಿದ್ದರು. ಇದೀಗ ಹೊಸದಾಗಿ ಕ್ಯಾಂಟೀನ್ ಆರಂಭಿಸಿರುವ ರಘು ಅವರು ಮಾಜಿ ಸಂಸದೆ ರಮ್ಯಾ ಅವರ ಅಭಿಮಾನಿ. ರಮ್ಯಾ ಅವರು ಸಂಸದರಾಗಿದ್ದಾಗ ಒಳ್ಳೆಯ ಕೆಲಸ ಮಾಡಿದ್ದಾರೆ. ಹಳ್ಳಿ ಹಳ್ಳಿಗೆ ಭೇಟಿ ಮಾಡಿ ಜನರ ಕಷ್ಟ ಆಲಿಸಿದ್ದಾರೆ. ಹಾಗಾಗಿ ಅವರ ಹೆಸರಲ್ಲೇ ಒಂದು ಕ್ಯಾಂಟೀನ್ ಆರಂಭಿಸಲು ತೀರ್ಮಾನಿಸಿದ್ದಾರೆ. ಮಂಡ್ಯದ ಅಶೋಕ ನಗರದ ತ್ರಿವೇಣಿ ರಸ್ತೆಯಲ್ಲಿ ಕ್ಯಾಂಟೀನ್ ಆರಂಭಿಸುತ್ತಿದ್ದು, ಕೇವಲ ಹತ್ತು ರೂಪಾಯಿಗೆ ಊಟ ತಿಂಡಿ ನೀಡಲು ಮುಂದಾಗಿದ್ದಾರೆ.

10 ರೂ.ಗೆ ಸಿಗುತ್ತೆ ಬಗೆ ಬಗೆ ಐಟಂ: ರಮ್ಯಾ ಕ್ಯಾಂಟೀನ್ ಆರಂಭ ಮಾಡುತ್ತಿರುವ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಘು, ತಾವೇ ಮಾಲೀಕರಾಗಿ, ತಾವೇ ಕೆಲಸಗಾರರಾಗಿ ಹೋಟೆಲ್‍ನಲ್ಲಿ ದುಡಿಯುವುದರಿಂದ 10 ರೂಪಾಯಿಗೆ ಊಟ ತಿಂಡಿ ನೀಡಿದರೂ ನನಗೆ ನಷ್ಟವಿಲ್ಲ ಎಂದು ಹೇಳುತ್ತಾರೆ.

ಮಸಾಲೆ ದೋಸೆ, ಪ್ಲೈನ್ ದೋಸೆ ಸೇರಿದಂತೆ ವಿವಿಧ ಬಗೆಯ ದೋಸೆಗಳು, ಇಡ್ಲಿ, ವಡೆ, ಮುದ್ದೆ, ಅನ್ನ, ಸಾಂಬಾರು, ರಾಗಿ ಗಂಜಿ ಸೇರಿದಂತೆ ಹಲವಾರು ಸ್ವಾದಿಷ್ಟ ಆಹಾರಗಳು ರಮ್ಯಾ ಕ್ಯಾಂಟೀನ್ ನಲ್ಲಿದೆ. ರಮ್ಯಾ ಕ್ಯಾಂಟೀನ್ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸಮೀಪದಲ್ಲೇ ಇದ್ದು, ಜಿಲ್ಲೆಯ ಎಲ್ಲ ತಾಲೂಕುಗಳಿಂದ ಜನ ಆಸ್ಪತ್ರೆಗೆ ಬರುತ್ತಾರೆ. ಅವರಲ್ಲಿ ಹಲವರ ಬಳಿ ಹೆಚ್ಚು ಹಣವಿರುವುದಿಲ್ಲ. ಅಂತಹವರಿಗೆ ರಮ್ಯಾ ಕ್ಯಾಂಟೀನ್ ನಿಂದ ತುಂಬಾ ಅನುಕೂಲವಾಗಲಿದೆ ಎಂಬುವುದು ಸಾರ್ವಜನಿಕರ ಅಭಿಪ್ರಾಯ.

ಮಾಜಿ ಸಂಸದೆ ರಮ್ಯಾ ಮಂಡ್ಯದಿಂದ ನಾಪತ್ತೆಯಾಗಿ ವರ್ಷ ಕಳೆದರೂ ಅವರ ಅಭಿಮಾನಿಗಳು ಮಾತ್ರ ರಮ್ಯಾ ಹೆಸರಲ್ಲಿ ಒಂದಿಲ್ಲೊಂದು ಒಂದು ಕೆಲಸ ಮಾಡುತ್ತಾ ಇದ್ದಾರೆ. ಇವೆಲ್ಲವನ್ನೂ ನೋಡಿದ ಮೇಲಾದರೂ ನವದೆಹಲಿಯಲ್ಲಿ ಪಕ್ಷ ಕಟ್ಟುವ ಕೆಲಸದಲ್ಲಿ ತೊಡಗಿರುವ ರಮ್ಯಾ ಅವರು ಮಂಡ್ಯಕ್ಕೆ ಬಂದು ತಮ್ಮ ಅಭಿಮಾನಿಗಳನ್ನು ಭೇಟಿಯಾಗುತ್ತಾರಾ ಎಂಬುದು ಸದ್ಯ ಮಂಡ್ಯದ ಜನರಿಗಿರುವ ಕುತೂಹಲ.


Click to comment

Leave a Reply

Your email address will not be published. Required fields are marked *

Advertisement