ಮಂಗಳೂರು: ವೇದಿಕೆಯ ಮೇಲೆ ಬಿರುಸಿನ ಹೆಜ್ಜೆಗಳನ್ನು ಹಾಕುತ್ತಿದ್ದ ಯುವತಿಯರು ತಾವು ಅಬಲೆಯರಲ್ಲ, ಸಬಲೆಯರು ಎಂದು ತೋರಿಸಿದ್ದರು. ಜಾನಪದ ಕಲೆ, ಆಧುನಿಕತೆಯ ಸೊಗಡಿನೊಂದಿಗೆ ಬೆರೆಯುವುದಲ್ಲದೇ ಫ್ಯಾಶನ್ ಲೋಕದಲ್ಲೂ ತಮ್ಮ ಛಾಪು ಮೂಡಿಸಲು ತಾವೆಷ್ಟು ಸಮರ್ಥರು ಎಂದು ಸಾಬೀತುಪಡಿಸಿದ್ದರು.
ಹೌದು. ಮಂಗಳೂರಿನ ಕೊಟ್ಟಾರದಲ್ಲಿರುವ ಕರಾವಳಿ ಕಾಲೇಜಿನಲ್ಲಿ ಫ್ಯಾಶನ್ ಡಿಸೈನಿಂಗ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ರಾಷ್ಟ್ರಮಟ್ಟದ ಫ್ಯಾಶನ್ ಫಿಯೆಸ್ಟಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಿ ಅದ್ಭುತ ಲೋಕವನ್ನೇ ಸೃಷ್ಟಿಸಿದ್ದರು. ವಿದ್ಯಾರ್ಥಿಗಳೇ ಸಿದ್ಧಪಡಿಸಿದ ಡ್ರೆಸ್‍ನಲ್ಲೇ ಶೋ ನಡೆದದ್ದು ವಿಶೇಷವಾಗಿತ್ತು.
Advertisement
Advertisement
ಕುಳಿತವರ ಕಾಲನ್ನೂ ಹೆಜ್ಜೆ ಹಾಕಿಸುವಂತೆ ಮಾಡುತ್ತಿದ್ದ ಆ ಮ್ಯೂಸಿಕ್‍ಗೆ ವಿವಿಧ ರೀತಿಯ ಬಟ್ಟೆಗಳನ್ನು ತೊಟ್ಟ ಯುವತಿಯರು ವೇದಿಕೆಯ ಮೇಲೆ ಹೆಜ್ಜೆ ಹಾಕುತ್ತಿದ್ದರು. ಅವರ ಮುಖದಲ್ಲಿ ಗಂಭೀರತೆ, ಆತ್ಮವಿಶ್ವಾಸ ಹಾಗೂ ಗೆಲುವಿನ ಛಲವಿತ್ತು. ಆ ವೇದಿಕೆಯ ಮೇಲೆ ಮಂದಹಾಸದೊಂದಿಗೆ ಹೆಜ್ಜೆ ಹಾಕುತ್ತಿರುವುದನ್ನು ನೋಡಿದರೆ ಅವರ ಸಾಮಥ್ರ್ಯ ಏನು ಎಂಬುದು ವ್ಯಕ್ತವಾಗುತ್ತಿತ್ತು. ಅವರ ಪ್ರತಿಭೆ ಕಂಡು ನೋಡುಗರು ಹುಬ್ಬೇರಿಸಿದ್ದರು.
Advertisement
Advertisement
ಈ ಡಿಸೈನ್ ಫೆಸ್ಟಿವಲ್ ನಲ್ಲಿ ಗೋವಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಣಿಪುರ, ಕರ್ನಾಟಕ ಸೇರಿದಂತೆ ದೇಶದ ನೂರಕ್ಕೂ ಅಧಿಕ ವಿದ್ಯಾರ್ಥಿಗಳ ತಂಡ ಭಾಗವಹಿಸಿತ್ತು. ಅಲ್ಲದೇ ವಿದ್ಯಾರ್ಥಿಗಳೇ ರ‍್ಯಾಂಪ್ ವಾಕ್ ನಡೆಸುವ ಮೂಲಕ ವಿವಿಧ ನೂತನ ಡಿಸೈನ್‍ಗಳನ್ನು ಪ್ರದರ್ಶಿಸಿದರು. ಆದರೆ ತೀರ್ಪುಗಾರರ ಮೆಚ್ಚುಗೆ ಗಳಿಸಿದ ಡಿಸೈನ್‍ಗಳು ಬಹುಮಾನಗಳನ್ನು ಬಾಚಿಕೊಂಡವು.
ಕೇವಲ ಫ್ಯಾಶನ್ ಶೋ ಮಾತ್ರವಲ್ಲದೇ ಜಾನಪದ ನೃತ್ಯಗಳನ್ನು ಕೂಡಾ ವಿದ್ಯಾರ್ಥಿನಿಯರು ಪ್ರದರ್ಶಿಸಿದ್ದರು. ನೃತ್ಯದ ವಿವಿಧ ಹೆಜ್ಜೆಗಳು, ಆಕರ್ಷಕ ಸ್ಟಂಟ್ ಗಳು ನೋಡುಗರನ್ನು ಹುಬ್ಬೇರಿಸುವಂತೆ ಮಾಡಿತ್ತು. ಹೂಗಳ ಡೆಕೋರೇಷನ್ ನಡೆಸುವ ಮೂಲಕ ತಮ್ಮ ಕಲಾಸಕ್ತಿಯನ್ನು ಕೂಡಾ ವಿದ್ಯಾರ್ಥಿನಿಯರು ತೋರಿಸಿದ್ದರು.
ಒಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಭಾವ ಮೂಡಿಸುವುದರ ಜೊತೆಗೆ ವಿಭಿನ್ನ ಅಭಿರುಚಿ ಮೂಡಲು ಕರಾವಳಿ ಕಾಲೇಜು ವರ್ಷ ಪ್ರತಿ ಫ್ಯಾಷನ್ ಶೋ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮ ಆಯೋಜಿಸುತ್ತಿದ್ದು, ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಲು ಸಹಾಯಕವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv