ಉಡುಪಿ: ಸರ್ಕಾರಿ ಶಾಲೆಗಳು ಮುಚ್ಚುವ ವಿರುದ್ಧ ಎಲ್ಲರೂ ಮಾತನಾಡುತ್ತಾರೆ. ಸರ್ಕಾರದ ನೀತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿರುತ್ತಾರೆ. ಮಕ್ಕಳಿಲ್ಲದೆ ಮುಚ್ಚುವ ಶಾಲೆಗಳನ್ನು ಹೇಗೆ ಉಳಿಸಬಹುದು ಎಂಬ ಬಗ್ಗೆ ಯಾರೂ ಆಲೋಚನೆ ಮಾಡೋದೇ ಇಲ್ಲ. ವಿಶ್ವದ ಅತೀ ದೊಡ್ಡ ಉದ್ಯಮ ಸಂಸ್ಥೆ ರಾಮಿ ಫೌಂಡೆಶನ್ ಕುಂದಾಪುರದಲ್ಲಿ ಕಾಲೇಜನ್ನೇ ದತ್ತು ಪಡೆದು ಸಾವಿರ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುತ್ತಿದೆ. ಈ ಮೂಲಕ ಸರ್ಕಾರಿ ಕಾಲೇಜು ಖಾಸಗಿ ಸಂಸ್ಥೆಗಳಿಗೆ ಸಡ್ಡು ಹೊಡೆಯುತ್ತಿದೆ.
ಖಾಸಗಿ ಕಾಲೇಜಿನಂತೆ ಕಂಡರೂ ಇದು ಸರ್ಕಾರಿ ಪದವಿ ಪೂರ್ವ ಕಾಲೇಜು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದ ಶ್ರೀ ಕಾಳಾವರ ವರದರಾಜ್ ಶೆಟ್ಟಿ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದು. ರಾಮಿ ಗ್ರೂಪ್ಸ್ ಆಫ್ ಹೋಟೆಲ್ಸ್ ಮತ್ತು ಚಾರಿಟೇಬಲ್ ಟ್ರಸ್ಟ್ ಈ ಕಾಲೇಜನ್ನು ದತ್ತು ಪಡೆದಿದೆ. 1,050 ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕೊಡುತ್ತಿದೆ. ರಾಮಿ ಗ್ರೂಪ್ ಆಫ್ ಹೋಟೆಲ್ಸ್- ಅಪಾರ್ಟ್ ಮೆಂಟ್ ಮತ್ತು ರೆಸಾರ್ಟ್ ಅಧ್ಯಕ್ಷ ಕಳಾವರ ವರದರಾಜ ಶೆಟ್ಟಿಯವರು ತಮ್ಮ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಿದರು. ಪ್ರತಿಭಾವಂತ ಮತ್ತು ಬಡ ವಿದ್ಯಾರ್ಥಿಗಳಿಗೆ 15 ಲಕ್ಷ ರೂಪಾಯಿಯ ಪ್ರೋತ್ಸಾಹ ಧನ ನೀಡಿದರು. ಈ ಮೂಲಕ ಉದ್ಯಮದಲ್ಲಿರುವವರು, ಸಿರಿವಂತರು ಸರ್ಕಾರಿ ಶಾಲೆಯನ್ನು ಉಳಿಸಲು ಸಹಾಯ ಮಾಡಬೇಕು ಎಂದು ಸಲಹೆ ನೀಡಿದರು.
Advertisement
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಮಿ ಗ್ರೂಪ್ ಅಧ್ಯಕ್ಷ ಕಾಳಾವರ ವರದರಾಜ್ ಶೆಟ್ಟಿ ಮಾತನಾಡಿ, ನಾನು 9 ನೇ ಕ್ಲಾಸಿಗೆ ವಿದ್ಯಾಭ್ಯಾಸ ಕಡಿದುಕೊಂಡು ಮುಂಬೈ ಸೇರಿದೆ. ನಾನು ವಿದ್ಯಾವಂತನಾಗಿದ್ದರೆ ಬೇರೆಯೇ ತರದಲ್ಲಿ ಬೆಳೆಯುತ್ತಿದ್ದೆ. ನನ್ನಂತೆ ಯಾರಿಗೂ ಆಗಬಾರದು ಅನ್ನೋದು ಕನಸು. ನನ್ನೆರಡು ಮಕ್ಕಳಂತೆಯೇ ಕಾಲೇಜಿನ 1,050 ಮಕ್ಕಳನ್ನು ಪ್ರೀತಿಸುತ್ತೇನೆ. ನಾನು ವಿದೇಶದಲ್ಲಿದ್ದರೂ ನನ್ನ ಊರಿಗೇನಾದರೂ ಮಾಡಬೇಕು ಅನ್ನೋದು ನನ್ನ ಆಸೆ ಅಂತ ಹೇಳಿದರು.
Advertisement
ಅಂತಾರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ್ತಿ ನೈನಾ ಜೈಸ್ವಾಲ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ತನ್ನ 8 ನೇ ವಯಸ್ಸಿನಲ್ಲಿ ಎಸ್‍ಎಸ್‍ಎಲ್‍ಸಿ ಮುಗಿಸಿರುವ ನೈನಾ ಜೈಸ್ವಾಲ್, ಜರ್ನಲಿಸಂ ಡಿಗ್ರೀ, 15ನೇ ವಯಸ್ಸಿಗೆ ಪಿಜಿ ಮುಗಿಸಿರುವ ಏಷ್ಯಾದ ಏಕೈಕ ಸಾಧಕಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ನೈನಾ ಸಾವಿರಾರು ವಿದ್ಯಾರ್ಥಿಗಳಿಗೆ ತನ್ನ ಸಾಧನೆ ಬಗ್ಗೆ ಕಿವಿಮಾತುಗಳನ್ನು ಹೇಳಿದರು. ಅತೀ ಚಿಕ್ಕ ವಯಸ್ಸಿನಲ್ಲಿ ಪದವಿ ಮುಗಿಸಿದ ನೈನಾ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ- ಪೋಷಕರು ಶಿಕ್ಷಕರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿಗಳನ್ನು ನೀಡಿದರು. ಜೀವನದಲ್ಲಿ ಮತ್ತು ಪಠ್ಯದಲ್ಲಿ ಅಳವಡಿಸಬೇಕು, ರಾಮಾಯಣ-ಪುರಾಣಗಳನ್ನು ಮೈಗೂಡಿಸಬೇಕು ಎಂದು ಹೇಳಿದರು.
Advertisement
ಕುಂದಾಪುರದ ಕೋಟೇಶ್ವರದ ಸರ್ಕಾರಿ ಪಿಯು ಕಾಲೇಜಿಗೆ ಕಳೆದ 10 ವರ್ಷಗಳಿಂದ ವರದರಾಜ್ ಶೆಟ್ಟಿ ಕೋಟ್ಯಾಂತರ ರೂಪಾಯಿ ಸಹಾಯಧನ ನೀಡಿದ್ದಾರೆ. ಈ ಸಂದರ್ಭ ವರದರಾಜ್ ಶೆಟ್ಟಿ ಸೇರಿದಂತೆ ಸಾಧಕರನ್ನು ಸನ್ಮಾನಿಸಲಾಯಿತು. ವರದರಾಜ್ ಶೆಟ್ಟಿ ಮಕ್ಕಳಾದ ರಾಮಿ ಮತ್ತು ರಜತ್ ಸಹಾಯಧನಗಳನ್ನು ವಿತರಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಒಟ್ಟಿನಲ್ಲಿ ವಿದೇಶದಲ್ಲಿ ಸಾವಿರಾರು ಕೋಟಿಯ ಉದ್ಯಮ ಇದ್ದರೂ ಕಾಳಾವರ ವರದರಾಜ್ ಶೆಟ್ಟಿ ತಾನು ಹುಟ್ಟಿದ ಊರಿಗೆ ಕೊಡುಗೆ ಕೊಡುವುದನ್ನು ಮರೆತಿಲ್ಲ. ಎಲ್ಲರಿಗೂ ಆದರ್ಶಮಯ ಕೆಸಲ ಮಾಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv