Exclusive: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ – ಎದೆ ಝಲ್ ಎನಿಸುವಂತಿದೆ ಸಿಸಿಟಿವಿ ದೃಶ್ಯಗಳು

Public TV
2 Min Read
Bengaluru Blast Rameshwaram Cafe 2

ಬೆಂಗಳೂರು: ವೈಟ್ ಫೀಲ್ಡ್ ಬಳಿ ಬ್ರೂಕ್ ಫೀಲ್ಡ್‌ನ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಫೋಟ (Rameshwaram Cafe Blast) ಸಂಭವಿಸಿದ್ದು, ಎದೆ ಝಲ್ ಎನಿಸುವ ಸಿಸಿಟಿವಿ ದೃಶ್ಯಗಳು ಬೆಳಕಿಗೆ ಬಂದಿದೆ.

Big explosion in Bengalurus Rameshwaram cafe several feared injured Anti Terrorist Squad Entry 2

ಬ್ಲಾಸ್ಟ್ ಸಂಭವಿಸೋದಕ್ಕೆ ಕೆಲವೇ ಕ್ಷಣಗಳಿಗೂ ಮುನ್ನ ಹೋಟೆಲಿನಲ್ಲಿ ಕೆಲವರು ಕ್ಯಾಶ್ ಕೌಂಟರ್ ಬಳಿ ಇದ್ದರೆ, ಇನ್ನು ಕೆಲವರು ಉಪಾಹಾರ ತೆಗೆದುಕೊಳ್ಳಲು ನಿಂತಿದ್ದರು. ಒಂದಷ್ಟು ಮಂದಿ ಊಟ ಮುಗಿಸಿ ಕೈತೊಳೆಯುವ ಜಾಗಕ್ಕೆ ತೆರಳುತ್ತಿದ್ದರು. ಈವೇಳೆ ಯಾರ ಊಹೆಗೂ ಮೀರಿದಂತೆ ಬಾಂಬ್ ಸ್ಫೋಟ ಸಂಭವಿಸಿದೆ. ಮಧ್ಯಾಹ್ನ 12:55ಕ್ಕೆ ಬಾಂಬ್ ಸ್ಫೋಟ ಸಂಭವಿಸಿದ್ದು, ಸ್ಫೋಟವಾಗುತ್ತಿದ್ದಂತೆ ದಟ್ಟ ಹೊಗೆ ಆವರಿಸಿದೆ. ಗ್ರಾಹಕರು ಮತ್ತು ಸಿಬ್ಬಂದಿ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.

Big explosion in Bengalurus Rameshwaram cafe several feared injured Anti Terrorist Squad Entry 1

ಸ್ಟೋಟದ ಭಯಾನಕ ದೃಶ್ಯಗಳು ಹೋಟೇಲ್ ಒಳಗಡೆ ಅಳವಡಿಸಿದ್ದ ಎರಡು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಗಳನ್ನು `ಪಬ್ಲಿಕ್ ಟಿವಿ’ ಹಂಚಿಕೊಂಡಿದೆ. 10 ಸೆಕೆಂಡುಗಳಲ್ಲಿ ಎರಡು ಸ್ಫೋಟ ಸಂಭವಿಸಿದೆ. ಈ ವೇಳೆ ಕೆಲವರಿಗೆ ಕಣ್ಣು-ತಲೆಯ ಭಾಗಕ್ಕೆ ಪೆಟ್ಟಾಗಿದೆ. ಯುವತಿಯೊಬ್ಬಳ ಬಟ್ಟೆ ಸುಟ್ಟುಹೋಗಿದೆ. ಸ್ಫೋಟದ ತೀವ್ರತೆಗೆ ನಡುಗಿದ ಗ್ರಾಹಕರು ಗಾಯಾಳುಗಳನ್ನು ಎತ್ತಿಕೊಂಡು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ರಾಮೇಶ್ವರ ಕೆಫೆ ಎಂ.ಡಿ. ಸ್ಫೋಟಕ ಮಾಹಿತಿ:
ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳನ್ನು ಗಮನಿಸಿದ್ದೇನೆ. 10 ಸೆಕೆಂಡುಗಳಲ್ಲಿ ಎರಡು ಬಾರಿ ಸ್ಫೋಟ ಸಂಭವಿಸಿದೆ. ಕೈತೊಳೆಯುವ ಜಾಗದಲ್ಲಿ ಸ್ಫೋಟ ಸಂಭವಿಸಿದೆ. ಅಲ್ಲಿ ಯಾವುದೇ ಸಿಲಿಂಡರ್ ಇಟ್ಟಿರಲಿಲ್ಲ. ಅಲ್ಲದೇ ಕೆಫೆಯಲ್ಲಿಟ್ಟಿದ್ದ ಸಿಲಿಂಡರ್‌ಗಳು ಸೇಫ್ ಆಗಿದೆ. ಸ್ಫೋಟ ಸಂಭವಿಸಿದ ಜಾಗದಲ್ಲಿ ಉದ್ಯೋಗಿಯೊಬ್ಬರ ಐಡಿ ಕಾರ್ಡ್ ಪತ್ತೆಯಾಗಿದೆ. ಬ್ಯಾಟರಿ ಬೋಲ್ಟ್‌ಗಳು  ಸಿಕ್ಕಿರೋದನ್ನ ಗಮನಿಸಿದ್ದೇನೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯುತ್ತಿದ್ದೇನೆ ಎಂದು ರಾಮೇಶ್ವರ ಕೆಫೆ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಹೇಳಿದ್ದಾರೆ.

ನಮಗೆ ಸಿಕ್ಕ ಮಾಹಿತಿ ಪ್ರಕಾರ, ಯಾರೋ ಗ್ರಾಹಕರ ರೀತಿ ಬಂದು ಬ್ಯಾಗ್ ಇಟ್ಟು ಹೋಗಿದ್ದಾರೆ. ಆ ಬ್ಯಾಗ್‌ನಿಂದ ಬ್ಲಾಸ್ಟ್ ಆಗಿದೆ. ಆತ ಬಂದು ಹೋಗಿರುವ ನಿಖರವಾದ ಸಮಯದ ಬಗ್ಗೆ ಮಾಹಿತಿ ಇಲ್ಲ. ಸಿಸಿಟಿವಿ ದೃಶ್ಯಗಳನ್ನು ಪೊಲೀಸರಿಗೆ ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಒಟ್ಟು 150ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. ಘಟನೆಯಲ್ಲಿ ಮೂವರು ಸಿಬ್ಬಂದಿ ಹಾಗೂ ಓರ್ವ ಗ್ರಾಹಕರು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದೇವೆ. ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಒಟ್ಟಿನಲ್ಲಿ ಇದು ಸಿಲಿಂಡರ್‌ನಿಂದ ಸಂಭವಿಸಿರುವ ಬ್ಲಾಸ್ಟ್ ಅಲ್ಲ. ನಮ್ಮ ಸಿಲಿಂಡರ್‌ಗಳೆಲ್ಲವೂ ಸೇಫ್ ಆಗಿವೆ ಎಂದು ಹೇಳಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮುಂದೆ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕು ಎಂದು ಹೇಳಿದ್ದಾರೆ.

Share This Article