– ಸಾಯಿ ಪ್ರಸಾದ್ ಹೆಸರಲ್ಲಿ ನಕಲಿ ಕ್ರಿಪ್ಟೋ ಖಾತೆ
– ಎನ್‌ಐಎಯಿಂದ ವಿಚಾರಣೆ ಎದುರಿಸಿದ ಬಿಜೆಪಿ ಕಾರ್ಯಕರ್ತ
– ಮತೀನ್ ನನ್ನ ಸ್ನೇಹಿತನಾಗಿದ್ದ, ಯಾವುದೇ ವ್ಯವಹಾರ ಮಾಡಿಲ್ಲ
ಶಿವಮೊಗ್ಗ: sai_p ಯೂಸರ್ ನೇಮ್ ಇಟ್ಟುಕೊಂಡು ಮತೀನ್ ಕ್ರಿಪ್ಟೊ ಕರೆನ್ಸಿ ವ್ಯವಹಾರ ಮಾಡುತ್ತಿದ್ದ. ಹೀಗಾಗಿ ನನ್ನನ್ನು ಮತ್ತು ತಮ್ಮನನ್ನು ರಾಷ್ಟ್ರೀಯ ತನಿಖಾ ದಳ(NIA) ವಿಚಾರಣೆಗೆ ಕರೆದಿತ್ತು ಎಂದು ತೀರ್ಥಹಳ್ಳಿಯ ಬಿಜೆಪಿ ಸದಸ್ಯ (BJP Member) ಸಾಯಿ ಪ್ರಸಾದ್ (Sai Prasad) ಅವರು ಹೇಳಿಕೆ ನೀಡಿದ್ದಾರೆ.
ರಾಮೇಶ್ವರಂ ಕೆಫೆ ಸ್ಫೋಟ (Rameshwaram Cafe Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಪೊಲೀಸರು ಬೆಂಗಳೂರಿಗೆ ಕರೆಸಿ ವಿಚಾರಣೆ ನಡೆಸಿ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಎದ್ದ ಹಲವಾರು ಪ್ರಶ್ನೆಗಳಿಗೆ ಸಾಯಿ ಪ್ರಸಾದ್ ಉತ್ತರ ನೀಡಿ ಆ ಜಾತಿ, ಈ ಜಾತಿ ಅಂತ ಅಲ್ಲ. ಜೆರಾಕ್ಸ್ ಮಾಡುವಾಗ, ಐಡಿ ನೀಡುವಾಗ ಬಹಳ ಎಚ್ಚರವಾಗಿರಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
Advertisement
Advertisement
ಸಾಯಿ ಪ್ರಸಾದ್ ಹೇಳಿದ್ದೇನು?
ಬೆಂಗಳೂರು ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಮತೀನ್ ತಾಹಾ (Abdul Mateen Taha) sai_p ಯೂಸರ್ ನೇಮ್ ಬಳಸಿ ಕ್ರಿಪ್ಟೋ ವ್ಯವಹಾರ ನಡೆಸಿದ್ದ. ಈ ಕಾರಣಕ್ಕೆ ನನ್ನನ್ನು ಮತ್ತು ತಮ್ಮನನ್ನು ವಿಚಾರಣೆ ನಡೆಸಿದ್ದರು. ಬೆಳಗ್ಗೆ 6 ಗಂಟೆಗೆ ವಿಚಾರಣೆಗೆ ಹೋಗಿದ್ದೆ ಸಂಜೆ 6 ಗಂಟೆಯವರೆಗೂ ನನ್ನನ್ನು ವಿಚಾರಣೆ ನಡೆಸಿದರು.
Advertisement
ನಾನು ಕ್ರಿಪ್ಟೋ ಕರೆನ್ಸಿ ವ್ಯವಹಾರ ಮಾಡುತ್ತಿದ್ದು, ಎರಡು ಅಧಿಕೃತ ಖಾತೆ ಇದೆ. ಒಂದರಲ್ಲಿ 40 ಸಾವಿರ ರೂ., ಒಂದರಲ್ಲಿ 3 ಸಾವಿರ ರೂ. ಹಾಕಿದ್ದೆ. ಕ್ರಿಪ್ಟೋ ಕರೆನ್ಸಿ ವ್ಯವಹಾರ ಅಕ್ರಮ ಅಲ್ಲ. ಕೆವೈಸಿ ಮಾಡಿಯೇ ಖಾತೆ ತೆರೆಯಲಾಗಿದೆ. ಆಧಾರ್ ಕಾರ್ಡ್, ಬ್ಯಾಂಕ್ ಖಾತೆಗಳನ್ನು ನೀಡಲಾಗಿದೆ. ನಾನು ಯಾವುದೇ ಅಕ್ರಮ ಹಣ ವರ್ಗಾವಣೆ ಮಾಡಿಲ್ಲ. ನನ್ನ ಬಳಿ ಇದ್ದ ಎಲ್ಲಾ ಮಾಹಿತಿಗಳನ್ನು ತಿಳಿಸಿದ್ದೇನೆ. ಷೇರು ಮಾರುಕಟ್ಟೆಯಂತೆ ಮುಂದೆ ಇದರಲ್ಲಿ ಲಾಭ ಸಿಗಬಹುದು ಎಂಬ ಕಾರಣಕ್ಕೆ ಹೂಡಿಕೆ ಮಾಡಿದ್ದೆ. ಇದನ್ನೂ ಓದಿ: ವಿಘ್ನೇಶ್, ಸುಮೀತ್ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್ – ರಾಮೇಶ್ವರಂ ಕೆಫೆ ಆರೋಪಿಗಳ ಮಾಹಿತಿ ನೀಡಿದ್ರೆ 10 ಲಕ್ಷ ಬಹುಮಾನ
Advertisement
ಮತಿನ್ ನಮ್ಮ ಜೊತೆ ಫುಟ್ ಬಾಲ್ ಆಟ ಆಡಲು ಬರುತ್ತಿದ್ದ. ನಾನು ತುಂಬಾ ವರ್ಷಗಳ ಹಿಂದೆ ಮತಿನ್‌ನನ್ನು ನೋಡಿದ್ದೆ. ಅವನ ಜೊತೆ ಸಂಪರ್ಕ ಇರಲಿಲ್ಲ, ಮಾತುಕತೆ ಇತ್ತು ಅಷ್ಟೇ. ಅವನು ಉಗ್ರ ಅಂತ ನನಗೆ ತಿಳಿದಿರಲಿಲ್ಲ.
ಬಿಜೆಪಿಯಲ್ಲಿ ನಾನು ಓಡಾಡುತ್ತಿದ್ದ ಕಾರಣ ನನ್ನ ಹೆಸರು ಬಂದಿದೆ. ನಾನೊಬ್ಬ ಸಾಮಾನ್ಯ ಪೇಂಟರ್ ಆಗಿದ್ದು ನಮ್ಮ ಅಪ್ಪ ಅಮ್ಮ ಇದ್ದಾರೆ. ಮೊಬೈಲ್ ಅಂಗಡಿ ಮಾಲೀಕ ಸಬೀಲ್ ನನ್ನ ಸ್ನೇಹಿತನಾಗಿದ್ದ. ಪೇಟಿಂಗ್ ಕೆಲಸ ಮಾಡುತ್ತಿದ್ದ ಕಾರಣ ಏನಾದರೂ ಕೆಲಸ ಇದ್ದರೆ ಕೆಲಸ ಹೇಳುತ್ತಿದ್ದ. ನಮ್ಮ ನಡುವೆ ಯಾವುದೇ ಅಕ್ರಮ ವ್ಯವಹಾರ ನಡೆದಿಲ್ಲ.
ಯಾರೇ ಆದರೂ ನಿಮ್ಮ ಐಡಿಯನ್ನು ಯಾರಿಗೂ ಕೊಡಬೇಡಿ. ನಿಮ್ಮ ಐಡಿ ಬೇರೆಯವರಿಗೆ ಕೊಟ್ಟರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಕುವೆಂಪು ಅವರ ಊರು ಅಂದರೆ ಒಳ್ಳೆಯ ಹೆಸರು ಇತ್ತು. ಆದರೆ ಈಗ ಕುವೆಂಪು ಅವರ ಊರಿಗೆ ಕೆಟ್ಟ ಹೆಸರು ಬರುತ್ತಿದೆ. ತೀರ್ಥಹಳ್ಳಿ ಅಂದ್ರೆ ಈಗ ಟೆರರಿಸ್ಟ್ ಊರು ಎನ್ನುವಂತಾಗಿದೆ.
ಲೋಕಸಭಾ ಚುನಾವಣೆ ಇರುವ ಕಾರಣ ಈಗ ಎಲ್ಲದರಲ್ಲೂ ಥಳಕು ಹಾಕಲಾಗುತ್ತದೆ. ದೇಶಕ್ಕೋಸ್ಕರ ಒಳ್ಳೆಯದು ಮಾಡು ಎಂದು ನಮ್ಮ ಸಂಘಟನೆ ಹೇಳಿಕೊಟ್ಟಿದೆ. ದೇಶಕ್ಕೆ ಕೆಟ್ಟದ್ದು ಮಾಡುವಂತಹ ಅವಶ್ಯಕತೆ ಇಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ. ಭಯೋತ್ಪಾದನೆಗ ನಾನು ಸಹಕಾರ ನೀಡಿಲ್ಲ. ಆ ಜಾತಿ, ಈ ಜಾತಿ ಅಂತ ಅಲ್ಲ. ಝೆರಾಕ್ಸ್ ಮಾಡುವಾಗ, ಐಡಿ ನೀಡುವಾಗ ಬಹಳ ಎಚ್ಚರವಾಗಿರಿ.ನಿಮ್ಮ ಮನೆಯ ಮಕ್ಕಳಿಗೂ ಯಾರಾದ್ರೂ ಈ ರೀತಿ ಮಾಡಬಹುದು.
ಯಾರಿದು ಮತೀನ್ ತಾಹಾ?
ಅಬ್ದುಲ್ ಮತೀನ್ ಪದವೀಧರರಾಗಿದ್ದು, ಮೂಲತಃ ಚಿತ್ರದುರ್ಗದವನಾಗಿದ್ದಾನೆ. ಆದರೆ ತಾಯಿಯೊಂದಿಗಿರಲು ತೀರ್ಥಹಳ್ಳಿಗೆ ತೆರಳಿದ್ದ. ನಂತರ ಉಗ್ರ ಸಂಘಟನೆಯೊಂದಿಗೆ ಕೈಜೋಡಿಸಿದ್ದ. ತೀರ್ಥಹಳ್ಳಿಯಲ್ಲಿದ್ದ ಈತ ಹಲವು ಮುಸ್ಲಿಂ ಯುವಕರ ತಲೆ ಕೆಡಿಸಿ ಉಗ್ರ ಸಂಘಟನೆಗೆ ಸೇರ್ಪಡೆಗೊಳಿಸಿದ್ದು, ರಾಜ್ಯದಲ್ಲಿ ನಡೆದ ಎಲ್ಲಾ ಭಯೋತ್ಪಾದಕ ಚಟುವಟಿಕೆಗಳ ಹಿಂದೆ ಮತೀನ್ ತಾಹಾ ಇದ್ದಾನೆ ಎಂದು ಶಂಕಿಸಲಾಗಿದೆ.
ಮತೀನ್ 5.5 ಅಡಿ ಹೊಂದಿದ್ದು ಮುಂದುಗಡೆ ತಲೆ ಬೋಳಾಗಿದ್ದು, ಹೆಚ್ಚಾಗಿ ಕ್ಯಾಪ್ ಧರಿಸುತ್ತಾನೆ. 30 ವರ್ಷದ ಈತ ವಿಘ್ನೇಶ್, ಸುಮಿತ್ ಅಥವಾ ಬೇರೆ ಹಿಂದೂ ವ್ಯಕ್ತಿಯ ಹೆಸರಿನಲ್ಲಿ ನಕಲಿ ಐಡಿ ದಾಖಲೆಯನ್ನು ಹೊಂದಿದ್ದಾನೆ ಎಂದು ಎನ್‌ಐಎ ತಿಳಿಸಿತ್ತು.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇರಿಸಿದ ವ್ಯಕ್ತಿ, ಸ್ಫೋಟ ನಡೆಸಿದ ಪ್ರಮುಖ ಆರೋಪಿ ಮುಸ್ಸಾವಿರ್ ಹುಸೇನ್ ಶಜೀಬ್ ಮತ್ತು ಅಬ್ದುಲ್ ಮತೀನ್ ನಾಪತ್ತೆಯಾಗಿದ್ದು ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ.