50 ಕೋಟಿಯ ಕಸದ ಬುಟ್ಟಿ ತಲೆ ಮೇಲೆ ಇಟ್ಕೊಂಡು ಹೊರಗೆ ಹೋಗೋಕ್ಕಾಗಲ್ಲ- ಸ್ಪೀಕರ್ ಬೇಸರ

Public TV
2 Min Read
speaker money

-ಇಲ್ಲೇ ಇರ್ತೀನಿ ದೊಮ್ಮಲೂರಿನ ನನ್ನ ಮನೆ ನೋಡ್ಕೊಂಡು ಬನ್ನಿ

ಬೆಂಗಳೂರು: 50 ಕೋಟಿ ಹಣವನ್ನು ಪಡೆದಿದ್ದೇನೆ ಎಂಬ ಕಸದ ಬುಟ್ಟಿಯನ್ನು ತಲೆ ಮೇಲೆ ಇಟ್ಟುಕೊಂಡು ಹೊರಗೆ ಹೋಗುವುದಕ್ಕೆ ಆಗಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಅಧಿವೇಶನದ ಆರಂಭದಿಂದಲೂ ಸ್ಪೀಕರ್ ಅವರು, ಈ ಆರೋಪದಿಂದ ತುಂಬಾ ನೊಂದಿದ್ದೇನೆ. ಅಧಿವೇಶನಕ್ಕೆ ಬರುವ ಮುನ್ನ ಒಂದು ಬಾರಿ ಮತ್ತೆ ಆಡಿಯೋ ಕೇಳಿಕೊಂಡು ಬಂದಿದ್ದೇನೆ. ಆ ಆಡಿಯೋದಲ್ಲಿ ಸ್ಪೀಕರ್‍ಗೆ 50 ಕೋಟಿ ರೂ. ನೀಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ನನ್ನ ಬಗ್ಗೆಯೇ ಆ ಮಾತು ಕೇಳಿಬಂದಾಗ ಅವಿರೋಧವಾಗಿ ಆಯ್ಕೆಯಾದಾಗ ನನಗೆ ಈ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಅನ್ನಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

vlcsnap 2019 02 11 14h27m05s562

ಬದುಕಿರೋ ಒಬ್ಬ ಅಣ್ಣ ನನ್ನ ಮೇಲೆ ಪ್ರಾಣ ಇಟ್ಟುಕೊಂಡಿದ್ದಾನೆ. ಈ ಕಸದ ಬುಟ್ಟಿ ತಲೆ ಮೇಲೆ ಇಟ್ಟುಕೊಂಡು ನನಗೆ ಹೋಗುವುದಕ್ಕೆ ಆಗಲ್ಲ. 50 ಕೋಟಿ ರೂ. ಹಣ ಪಡೆದಿದ್ದೆನೆ ಎಂಬ ಆರೋಪ ಹೊತ್ತ ನಾನು ಮನೆಗೆ ತೆರಳಿ ನನ್ನ ಮುಖವನ್ನು ಹೆಂಡತಿ, ಮಕ್ಕಳಿಗೆ ಹೇಗೆ ತೋರಿಸಲಿ. ನನ್ನ ಮೇಲೆ ಆರೋಪ ಮಾಡಿದ ವ್ಯಕ್ತಿ ಸದನದಲ್ಲಿಯೇ ಇದ್ದಾರೆ. ಆರೋಪ ಮುಕ್ತನಾದ್ರೆ ಆ ಶಾಸಕ ರಾಜಕಾರಣದಿಂದ ದೂರ ಉಳಿಯಬೇಕು, ಇಲ್ಲವೇ ನಾನೇ ರಾಜಕೀಯದಿಂದ ನಿವೃತ್ತಿ ಪಡೆಯಬೇಕು ಎಂದು ಒಂದು ಕ್ಷಣ ಸ್ಪೀಕರ್ ಗರಂ ಆದ್ರು.

ಬೆಂಗಳೂರಿನಲ್ಲಿ ಸರ್ಕಾರಿ ಬಂಗಲೆಯನ್ನ ಸಹ ತೆಗೆದುಕೊಳ್ಳದೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ನೀಡಿದ್ರೆ ನಾನು ಅದನ್ನು ಎಲ್ಲಿ ಇಟ್ಟುಕೊಳ್ಳಲಿ. ಯಾರಿಗಾದ್ರೂ ಅನುಮಾನ ಇದ್ದರೆ ನಾನು ಇಲ್ಲೇ ಇರ್ತಿನಿ, ದೊಮ್ಮಲೂರಿನ ನನ್ನ ಬಾಡಿಗೆ ಮನೆಯನ್ನು ನೋಡಿಕೊಂಡು ಬನ್ನಿ. ನನ್ನ ರಾಜಕೀಯ ಗುರು ನಮ್ಮ ತಾಯಿ. ಅವರನ್ನು ಕಳೆದುಕೊಂಡು 28 ವರ್ಷಗಳಾಗಿದೆ. ನನ್ನ ತಾಯಿಗೆ ನಾನು 8ನೇಯವನು ಹಾಗೆಯೇ ಕೊನೆಯವನು ಕೂಡ. ನಮಗಿಂತ ಒಳ್ಳೆಯವರ ಮನೆಗೆ ಹೋದರೆ ಅಥವಾ ನೆಂಟರು ಬಂದ್ರೆ ಕಾಲಿನ ಧೂಳು ನಮ್ಮ ಮನೆಗೆ ಅಂಟಿಕೊಳ್ಳಬಾರದೆಂದು ಕಾಲು ತೊಳೆದು ಬರಲು ಹೇಳಿಕೊಟ್ಟಿದ್ದರು. ಆ ಧೂಳು ನಮ್ಮ ಮನೆಯಲ್ಲಿರಬಾರದು ಎಂದು ಹೇಳಿಕೊಟ್ಟಿದ್ದರು ಎಂದು ಮಾತು ಮುಂದುವರಿಸುತ್ತಾ ಸ್ಪೀಕರ್ ಕಣ್ಣೀರಿಟ್ಟರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *