– ಗೌರವವಾಗಿ ಬದುಕುವವರನ್ನು ಸಾಯಿಸುತ್ತಿದ್ದೀರಿ
– ಪ್ರಾಮಾಣಿಕರು ಎಲ್ಲಿ ಹೋಗುತ್ತಿದ್ದಾರೆ
ಬೆಂಗಳೂರು: ಸದನದ ಸದಸ್ಯರ ಕಾಲೆಳೆದು ನಗೆಸುತ್ತ, ಮಾಹಿತಿ ನೀಡಿ ಕಲಾಪ ನಡೆಸುತ್ತಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ಕೆಂಡಾಮಂಡಲವಾದರು. ಶಾಸಕರ ಖರೀದಿ ವಿಚಾರವಾಗಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ವಿರುದ್ಧ ಚಾಟಿ ಬೀಸಿದರು.
ನಮ್ಮ ಶಾಸಕರಿಗೆ ಹಣ ಹಾಗೂ ಅಧಿಕಾರದ ಆಮಿಷವನ್ನು ಬಿಜೆಪಿಯವರು ಒಡ್ಡಿದ್ದರು ಎಂದು ಸಿಎಂ ಪ್ರಸ್ತಾಪಿಸಿದರು. ಈ ವೇಳೆ ಸದನದಲ್ಲಿ ಗಲಾಟೆ ಶುರುವಾಗುತ್ತಿದ್ದಂತೆ ಏರು ಧ್ವನಿಯಲ್ಲಿ ಮಾತು ಆರಂಭಿಸಿದ ಸ್ಪೀಕರ್ ಅವರು, ಒಂದೊಂದು ಕ್ಷಣವನ್ನೂ ಬೆಂಕಿಯ ಮೇಲೆ ಕುಳಿತಿದ್ದೇನೆ ಎನ್ನುವಂತೆ ನನಗೆ ಭಾಸವಾಗುತ್ತದೆ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಅಂತವರು ಹೊಟ್ಟೆಗೆ ಏನು ತಿನ್ನುತ್ತಾರೆ ಎಂದು ಕಿಡಿಕಾರಿದರು.
Advertisement
Advertisement
ನಾನು ವಾಸವಿರುವ ಮನೆಗೆ ಬಂದು ನೋಡಿ. ಸರ್ಕಾರದ ಬೋರ್ಡ್ ಹಾಕಿಸಿಲ್ಲ. ಒಬ್ಬ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಂಡಿಲ್ಲ. ನನಗೆ ಕೊಟ್ಟಿರುವ ವಾಹನದ ಮೇಲಿರುವ ಗೂಟವನ್ನು ಕೂಡ ತೆಗೆಸಿ ಹಾಕಿದ್ದೇನೆ. ನಿಮ್ಮ ಬದುಕು ಹೀಗಿದೆ ಅಂತ ನೀವೇ ನೋಡಿಕೊಳ್ಳಿ. ಅವರೆಲ್ಲರೂ ನಿಮ್ಮ ಹುಳುಕುಗಳನ್ನು ಬಿಚ್ಚಿಡುತ್ತಿದ್ದಾರೆ ಎಂದು ಚಾಟಿ ಬೀಸಿದರು.
Advertisement
ನೀವು ಈ ರೀತಿಯ ಜೀವನ ನಡೆಸುವುದಲ್ಲದೇ ನಮ್ಮನ್ನು ಅಪರಾಧಿಗಳನ್ನಾಗಿ ಮಾಡುತ್ತೀರಾ? ನಮ್ಮ ಕುಟುಂಬದವರು ಹೇಗೆ ಬದುಕಬೇಕು? ನಮ್ಮ ಮನೆಯವರು ಈ ಕಡೆಗೆ ಮುಖ ಕೂಡ ಹಾಕಿಲ್ಲ. ನಿಮ್ಮ ಹೊಸಲು ವ್ಯಾಪಾರ, ಸ್ವಾರ್ಥಕ್ಕೆ ಸಾಕಾಗಿದೆ. ಗೌರವವಾಗಿ ಬದುಕುವವರನ್ನು ಸಾಯಿಸುವುಕ್ಕೆ ಹೋಗುತ್ತಿರುವಿರಿ ಎಂದು ಅಸಮಾಧಾನ ಹೊರ ಹಾಕಿದರು.
Advertisement
ಸ್ಪೀಕರ್ ಸ್ಥಾನದಲ್ಲಿ ಹೇಗೆ ಕುಳಿತಿದ್ದೇನೆ ಅಂತ ನನಗೆ ಗೊತ್ತಿದೆ. ಒಂದೊಂದು ದಿನ ಬದುಕು ನಡೆಸುವುದು ಎಷ್ಟು ಕಷ್ಟ ಎನ್ನುವುದು ನನಗೆ ಗೊತ್ತಿದೆ. ಒಂದೊಂದೆ ವಿಚಾರವನ್ನು ಬಿಚ್ಚಿಡುತ್ತಾ ಹೋದರೆ ನಿಮ್ಮ ಸ್ವಾರ್ಥ ಎಲ್ಲಿಗೆ ಬೇಕಾದರೂ ಬಂದು ನಿಲ್ಲಬಹುದು. ಪ್ರಾಮಾಣಿಕರು ಇರುವುದು ನಿಮಗೂ (ವಿಪಕ್ಷಕ್ಕೂ) ಬೇಕಾಗಿಲ್ಲ. ಇವರಿಗೂ (ಆಡಳಿತ ಪಕ್ಷಕ್ಕೂ) ಬೇಕಾಗಿಲ್ಲ. ಎಲ್ಲಿ ಹೋಗುತ್ತಿದ್ದಾರೆ ಪ್ರಾಮಾಣಿಕವಾಗಿ ಬದುಕಬೇಕು ಎನ್ನುವವರು ಎಂದು ಗುಡುಗಿದರು.
ಬಿಚ್ಚಿ ಇನ್ನೂ ಬಿಚ್ಚಿ. ಹೊಟ್ಟೆಯಲ್ಲಿ ಇರುವುದನ್ನು ಎಲ್ಲವನ್ನೂ ಬಿಚ್ಚಿಡಿ. ನಿಮ್ಮಲ್ಲಿರುವ ಗಲೀಜು, ಹೊಲಸು ಒಮ್ಮಿಗೆ ಹೊರಗೆ ಬಂದುಬಿಡಲಿ. ಆಗ ಜನರಿಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುತ್ತದೆ. ರೆಕಾರ್ಡಿಗೆ ಹೋಗುವುದನ್ನು ನಾನು ತಡೆಯುವುದಿಲ್ಲ. ನೀವು (ವಿಪಕ್ಷದವರು) ಆಡಳಿತ ಪಕ್ಷದವರ ಮೇಲೆ ಕೇಸ್ ಹಾಕಬೇಕು. ಅದು ಎಲ್ಲಿಗೆ ಹೋಗುತ್ತೆ ಅಂತ ನೋಡೋಣ ಎಂದು ಕೆಂಡಾಮಂಡಲವಾದರು.