– ಖಾತೆ ಕಸರತ್ತಿಗೆ ಇಂದು ಬೀಳುತ್ತೆ ತೆರೆ
– ಹೈಕಮಾಂಡ್ ಅಣತಿಯಂತೆ ನಡೆದಿದೆ ಖಾತೆ ಹಂಚಿಕೆ
ಬೆಂಗಳೂರು: ಬೆಳಗಾವಿ ರಾಜಕಾರಣ ಪ್ರವೇಶಿಸಿದ್ದಕ್ಕೆ ಅಸಮಾಧಾನಗೊಂಡು ಡಿಕೆ ಶಿವಕುಮಾರ್ ವಿರುದ್ಧ ಬಂಡಾಯ ಸಾರಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಡಿಕೆಶಿ ಬಳಿಯಿದ್ದ ಜಲಸಂಪನ್ಮೂಲ ಖಾತೆ ಸಿಗುವ ಸಾಧ್ಯತೆಯಿದೆ.
ಮಂತ್ರಿಗಳಾಗಿ 10 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದರೂ ಇನ್ನು ಖಾತೆ ಹಂಚಿಕೆ ಆಗಿರಲಿಲ್ಲ. ಇಂದು ಖಾತೆ ಹಂಚಿಕೆ ಆಗಲಿದ್ದು ಜಾರಕಿಹೊಳಿಗೆ ಬಹುತೇಕ ಜಲಸಂಪನ್ಮೂಲ ಖಾತೆಯೇ ಸಿಗುವ ಸಾಧ್ಯತೆಯಿದೆ. ಜಲಸಂಪನ್ಮೂಲ ಖಾತೆ ಸಿಗಬೇಕೆಂದು ಜಾರಕಿಹೊಳಿ ಪಟ್ಟು ಹಿಡಿದಿದ್ದರು. ಈ ಬೇಡಿಕೆಯನ್ನು ಸಿಎಂ ಈಡೇರಿಸಿದ್ದಾರೆ ಎನ್ನಲಾಗುತ್ತಿದೆ.
Advertisement
Advertisement
ಪ್ರಮಾಣವಚನ ಸ್ವೀಕರಿಸಿದ ದಿನದಂದು ಎಲ್ಲ ಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರೆ, ಜಾರಕಿಹೊಳಿ ಯಾವುದೇ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾಗಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ದಿನಕ್ಕೊಂದು ಬಾಂಬ್ ಸಿಡಿಸುತ್ತಿದ್ದ ಜಾರಕಿಹೊಳಿ ಮೌನ ಹಲವು ಪ್ರಶ್ನೆಗಳನ್ನು ಎತ್ತಿತ್ತು.
Advertisement
ಪ್ರಮಾಣವಚನಕ್ಕೂ ಮುನ್ನವೇ ಜಾರಕಿಹೊಳಿ ಜಲಸಂಪನ್ಮೂಲ ಖಾತೆ ಸಿಗಬೇಕೆಂದು ಸಿಎಂ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಸಿಎಂ ಯಾವುದೇ ಖಚಿತ ಭರವಸೆ ನೀಡಿರಲಿಲ್ಲ. ಹೀಗಾಗಿ ಖಚಿತ ಭರವಸೆ ಸಿಗದ ಕಾರಣ ಜಾರಕಿಹೊಳಿ ಮೌನಕ್ಕೆ ಶರಣಾಗಿದ್ದರು ಎಂದು ಹೇಳಲಾಗುತ್ತಿದೆ.
Advertisement
ಜಾರಕಿಹೊಳಿಯವರಿಗೆ ಜಲಸಂಪನ್ಮೂಲ ಖಾತೆ ಕೊಡುವಂತೆ ಹೈಕಮಾಂಡ್‍ಗೂ ಸಿಎಂ ಮನವರಿಕೆ ಮಾಡಿದ್ದಾರೆ. ಡಿಸಿಎಂ ಸ್ಥಾನ ಕೊಡದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಖಾತೆ ಕೊಡಲು ಸಿಎಂ ಒಪ್ಪಿಕೊಂಡಿದ್ದಾರೆ. ಡಾ.ಕೆ.ಸುಧಾಕರ್ ಅವರಿಗೆ ಖಾತೆ ಹಂಚಿಕೆಯಲ್ಲಿ ಬಂಪರ್ ಖಾತೆ ಸಿಗಲಿದೆ. ಸುಧಾಕರ್‌ಗೆ ವೈದ್ಯಕೀಯ ಶಿಕ್ಷಣ ಅಥವಾ ಇಂಧನ ಇಲಾಖೆ ಸಿಗೋ ಸಾಧ್ಯತೆ ಇದೆ ಎನ್ನಲಾಗಿದೆ.
ಆದರೆ ಬೆಂಗಳೂರು ಅಭಿವೃದ್ಧಿ ಮತ್ತು ಗೃಹ ಖಾತೆಗಳ ಹಂಚಿಕೆ ಸದ್ಯಕ್ಕಿಲ್ಲ. ಇವೆರಡೂ ಖಾತೆಗಳನ್ನೂ ಹಂಚಿಕೆ ಮಾಡದಿರಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ಸಿಎಂ ತಮ್ಮಲ್ಲೇ ಉಳಿಸಿಕೊಳ್ಳಲಿದ್ದಾರೆ. ಗೃಹ ಖಾತೆ ಬಸವರಾಜ್ ಬೊಮ್ಮಾಯಿ ಬಳಿಯೇ ಉಳಿಯಲಿದೆ. ಈ ಎರಡೂ ಖಾತೆಗಳನ್ನು ಮಿತ್ರಮಂಡಳಿಗೆ ಹಂಚಿಕೆ ಮಾಡದಿರುವ ಮೂಲಕ ಪಕ್ಷದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಗೆ ಬ್ರೇಕ್ ಹಾಕಲು ಸಿಎಂ ಕಸರತ್ತು ನಡೆಸಿದ್ದಾರೆ.
ಯಾರಿಗೆ ಯಾವ ಖಾತೆ?
1. ರಮೇಶ್ ಜಾರಕಿಹೊಳಿ – ಜಲಸಂಪನ್ಮೂಲ ಖಾತೆ
2. ಎಸ್.ಟಿ ಸೋಮಶೇಖರ್ – ಸಹಕಾರ ಖಾತೆ
3. ಬೈರತಿ ಬಸವರಾಜು – ನಗರಾಭಿವೃದ್ಧಿ ಇಲಾಖೆ
4. ಬಿ.ಸಿ.ಪಾಟೀಲ್ – ಅರಣ್ಯ ಇಲಾಖೆ
5. ಆನಂದ್ ಸಿಂಗ್ – ಯುವಜನ, ಕ್ರೀಡಾ, ಕೌಶಲ್ಯಾಭಿವೃದ್ಧಿ ಇಲಾಖೆ
6. ಗೋಪಾಲಯ್ಯ – ಕಾರ್ಮಿಕ ಇಲಾಖೆ
7. ಶಿವರಾಮ್ ಹೆಬ್ಬಾರ್ – ಪೌರಾಡಳಿತ ಇಲಾಖೆ
8. ಶ್ರೀಮಂತ ಪಾಟೀಲ್ – ತೋಟಗಾರಿಕೆ ಇಲಾಖೆ ಮತ್ತು ಸಕ್ಕರೆ ಖಾತೆ
9. ಡಾ.ಕೆ.ಸುಧಾಕರ್ – ವೈದ್ಯಕೀಯ ಇಲಾಖೆ
10. ನಾರಾಯಣಗೌಡ – ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ