ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಡೋಲಾಯಮಾನ ಸ್ಥಿತಿಯಲ್ಲಿದೆ. ಸಂಪುಟ ವಿಸ್ತರಣೆ ಯಾವಾಗ ನಡೆಯುತ್ತದೆ? ಎಷ್ಟು ಜನ ಶಾಸಕರು ಸಚಿವರಾಗುತ್ತಾರೆ ಎನ್ನುವುದು ಇನ್ನೂ ಸ್ಪಷ್ಟವಾಗುತ್ತಿಲ್ಲ. ಈ ಪೈಕಿ ಗೆದ್ದ ಎಲ್ಲ ಅರ್ಹ ಶಾಸಕರಿಗೂ ಸಚಿವ ಸ್ಥಾನ ಸಿಗುತ್ತಾ ಅನ್ನೋದೂ ಪಕ್ಕಾ ಆಗಿಲ್ಲ. ಈ ಮಧ್ಯೆ ಸೋತವರ ಸ್ಥಿತಿ ಬಗ್ಗೆ ತಲೆ ಕೆಡಿಸಿಕೊಳ್ಳಲು ಯಾರೂ ಇಲ್ಲದಂತಾಗಿದೆ. ಈಗ ಮಿತ್ರಮಂಡಳಿ ಶಾಸಕರು ಸಹ ಸೋತವರ ಪರ ಬ್ಯಾಟಿಂಗ್ ಮಾಡುವುದನ್ನು ನಿಲ್ಲಿಸಿ ಬಿಟ್ಟಿದ್ದಾರೆ.
ಹೌದು, ಮಿತ್ರಮಂಡಳಿ ಶಾಸಕರು ಸೋತವರಿಗೂ ಸಚಿವ ಸ್ಥಾನ ಕೊಡಿ ಅನ್ನುವ ತಮ್ಮ ಆಗ್ರಹವನ್ನು ಕೈಬಿಟ್ಟಿರುವುದು ಸ್ಪಷ್ಟವಾಗಿದೆ. ಬೆಂಗಳೂರಿನಲ್ಲಿ ಇಂದು ಮಾತಾಡಿದ ಮಿತ್ರಮಂಡಳಿ ನಾಯಕ ರಮೇಶ್ ಜಾರಕಿಹೊಳಿ, ಬಿಜೆಪಿ ಹೈಕಮಾಂಡ್ ಗೆದ್ದ 11 ಶಾಸಕರಿಗೂ ಸಚಿವ ಸ್ಥಾನ ಕೊಡಬೇಕು ಎಂದು ಬಲವಾಗಿ ಆಗ್ರಹಿಸಿದರು. ಆದರೆ ಸೋತವರ ವಿಚಾರದಲ್ಲಿ ಮಾತ್ರ ರಮೇಶ್ ಜಾರಕಿಹೊಳಿ ಧ್ವನಿ ಸಾಫ್ಟಾಗಿ ಹೋಯಿತು. ಸೋತವರಿಗೆ ಸಚಿವ ಸ್ಥಾನ ಕೊಡುವ ಸಂಬಂಧ ಹೈಕಮಾಂಡ್ ನಿರ್ಧರಿಸಲಿದೆ. ಸೋತವರಿಗೂ ಸಚಿವ ಸ್ಥಾನ ಕೊಡಿ ಎಂದು ಮನವಿ ಮಾಡಿದ್ದೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
Advertisement
Advertisement
ಸಾಹುಕಾರ್ ಹೇಳಿಕೆ ಈಗ ಮಿತ್ರಮಂಡಳಿ ನಡುವೆ ಚರ್ಚೆ ಹುಟ್ಟು ಹಾಕಿದೆ. ಗೆದ್ದವರಿಗೆ ಸಚಿವ ಸ್ಥಾನ ಕೊಡಿ ಎಂದು ಕೇಳಿದಷ್ಟೇ ಗಟ್ಟಿಯಾಗಿ ಸೋತವರಿಗೆ ಕೊಡಿ ಅಂತ ರಮೇಶ್ ಜಾರಕಿಹೊಳಿ ಕೇಳದಿರುವುದು ಸೋತವರ ಮನಸು ಕೆಡಿಸಿದೆ ಎನ್ನಲಾಗಿದೆ. ಹಾಗಿದ್ರೆ, ಸೋತವರ ಪರ ನಿಲ್ಲದೇ ಕೈಕೊಡ್ತಾ ಮಿತ್ರಮಂಡಳಿ ಶಾಸಕರ ಟೀಂ ಎಂಬ ಚರ್ಚೆ ನಡೆಯುತ್ತಿದೆ. ಸೋತವರು ಅಸ್ತಿತ್ವಕ್ಕಾಗಿ ತಮ್ಮ ಪರ ತಾವು ಮಾತ್ರವೇ ಹೋರಾಡಬೇಕಾದ ಅನುವಾರ್ಯತೆ ಈಗ ಸೃಷ್ಟಿಯಾಗಿದೆ.
Advertisement
ಬಿಜೆಪಿ ಪ್ಲಾನ್ ಸಕ್ಸಸ್:
ಇಂಥ ಸನ್ನಿವೇಶ ಸೃಷ್ಟಿಯಾಗಲು ಬಿಜೆಪಿ ರೂಪಿಸಿದ ಪ್ಲಾನ್ ಕಾರಣ ಎನ್ನಲಾಗಿದೆ. ಸೋತವರ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶದ ನೆಪವನ್ನು ಅಡ್ಡ ತರಲಾಯ್ತು. ಸೋತವರಿಗೆ ಸಚಿವ ಸ್ಥಾನ ಕೊಡಲು ಕಾನೂನು ತೊಡಗಿದೆ ಎಂದು ನಂಬಿಸುವ ಪ್ರಯತ್ನಗಳಲ್ಲೂ ಯಶಸ್ವಿಯಾಯಿತು ಬಿಜೆಪಿ ಪಾಳಯ. ಸುಪ್ರೀಂಕೋರ್ಟ್ ಆದೇಶ ಕುರಿತು ಅರ್ಹ ಶಾಸಕರ ತಂಡಕ್ಕೂ ಮನವೊಲಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾದರು. ಸುಪ್ರೀಂಕೋರ್ಟ್ ಆದೇಶ ವಿಚಾರವನ್ನು ಹರಿಯಬಿಟ್ಟಿದ್ದಲ್ಲದೇ ಕೊನೆಕೊನೆಗೆ ಅರ್ಹರ ಬಾಯಲ್ಲೇ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂಬ ಸಂದೇಶವೂ ರವಾನೆಯಾಗುವಂತೆ ಮಾಡುವಲ್ಲಿ ಬಿಜೆಪಿ ಬಿಜೆಪಿ ನಾಯಕರು ಯಶಸ್ವಿಯಾದರು. ಇದರ ಪರಿಣಾಮವಾಗಿಯೇ, ಈಗ ಮಿತ್ರಮಂಡಳಿ ನಾಯಕ ರಮೇಶ್ ಜಾರಕಿಹೊಳಿಯವರೇ ಸೋತವರ ಬಗ್ಗೆ ಥಂಡಾ ಹೊಡೆದಿದ್ದು, ಸೋತವರಿಗೆ ಸಚಿವ ಸ್ಥಾನ ಮರೀಚಿಕೆ ಆಗಿದೆ. ಹಾಗಿದ್ರೆ ಸೋತವರ ಮುಂದಿನ ನಡೆ ಏನು ? ಮುಂದೆ ಅವರಿಗ್ಯಾರು ದಿಕ್ಕು? ಈ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಿದೆ.