ಬೆಂಗಳೂರು: ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶ ಹೊರಬರುತ್ತಿದ್ದಂತೆ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಫುಲ್ ಆಕ್ಟೀವ್ ಆಗಿದ್ದು, ಮೈತ್ರಿ ಸರ್ಕಾರ ಉರುಳಿಸಲು ಪ್ಲಾನ್ ಸಿದ್ಧಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಎಕ್ಸಿಟ್ ಪೋಲ್ ಫಲಿತಾಂಶದಲ್ಲಿ 20-22 ಸೀಟು ಬರುವುದು ಖಚಿತವಾಗುತ್ತಿದ್ದಂತೆ ಯುಡಿಯೂರಪ್ಪ ಅವರ ಮುಖ್ಯಮಂತ್ರಿ ಕನಸು ಮತ್ತೆ ಚಿಗುರಿದೆ. ಆದ್ದರಿಂದ ಬಿಎಸ್‍ವೈ ಸೂಚನೆ ಮೇರೆಗೆ ಶಾಸಕ ರಮೇಶ್ ಜಾರಕಿಹೊಳಿ ನಾಳೆ(ಬುಧವಾರ) ದೆಹಲಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ.
Advertisement
Advertisement
ರಮೇಶ್ ಜಾರಕಿಹೊಳಿ ನಾಳೆ ದೆಹಲಿಗೆ ತೆರಳಿ ಬಿಜೆಪಿ ನಾಯಕರನ್ನು ಭೇಟಿ ಮಾಡಲಿದ್ದಾರೆ. ಕಳೆದ ದಿನದಿಂದಲೇ ಯಡಿಯೂರಪ್ಪರ ಸಂಪರ್ಕದಲ್ಲಿ ರಮೇಶ್ ಜಾರಕಿಹೊಳಿ ಇದ್ದು, ಅವರಿಗೆ 4-5 ಮಂದಿ ಶಾಸಕರನ್ನು ಕರೆತರುವ ಭರವಸೆ ಕೊಟ್ಟಿದ್ದಾರೆ. ಜೊತೆಗೆ ಉಳಿದ ಶಾಸಕರನ್ನು ಸೆಳೆಯುವ ಹೊಣೆಗಾರಿಕೆ ನಿಮ್ಮದೇ ಎಂದು ಬಿಎಸ್‍ವೈಗೆ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
Advertisement
ರಮೇಶ್ ಜಾರಕಿಹೊಳಿ ಎಕ್ಸಿಟ್ ಪೋಲ್ ಫಲಿತಾಂಶದಿಂದ ಶಾಸಕರನ್ನು ಸೆಳೆಯುವ ಕಾರ್ಯಾಚರಣೆಯನ್ನು ಚುರುಕು ಮಾಡಿದ್ದು, ಕಳೆದ ಇಡೀ ದಿನ ಶಾಸಕರ ಸಂಪರ್ಕದಲ್ಲಿದ್ದಾರೆ. ಅಷ್ಟೇ ಅಲ್ಲದೇ ಸೋಮವಾರ ಖಾಸಗಿ ಹೋಟೆಲಿನಲ್ಲಿ ಶಾಸಕ ಬಿ.ನಾಗೇಂದ್ರ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಜೊತೆಗೆ ಮಹೇಶ್ ಕುಮಟಳ್ಳಿ, ಜೆ.ಎನ್.ಗಣೇಶ್, ಭೀಮಾನಾಯ್ಕ್ ಸೇರಿ ಕೆಲವರ ಮನವೊಲಿಕೆಗೆ ಮುಂದಾಗಿದ್ದರು.
Advertisement
ಇಂದು ರಮೇಶ್ ಜಾರಕಿಹೊಳಿ ಆಪ್ತ ಶಾಸಕರ ಜೊತೆ ರಹಸ್ಯ ಮಾತುಕತೆ ನಡೆಸಿದ್ದು, ಮಾಧ್ಯಮದವರ ಕಣ್ತಪ್ಪಿಸಿ ಓಡಾಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ ನಿನ್ನೆ ತಡರಾತ್ರಿ ಬೆಂಗಳೂರಿನ ಸರ್ಕಾರಿ ನಿವಾಸಕ್ಕೆ ಬಂದಿದ್ದರು. ಇಂದು ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ.