ಬೆಂಗಳೂರು: ಕಾಂಗ್ರೆಸ್ ಬಂಡಾಯ ನಾಯಕ ರಮೇಶ್ ಜಾರಕಿಹೊಳಿ ಅವರನ್ನು ಮನವೊಲಿಸುವ ಸಿಎಂ ಕುಮಾರಸ್ವಾಮಿ ಅವರ ಕಾರ್ಯಕ್ಕೆ ಹಿನ್ನಡೆಯಾಗಿದ್ದು, ಎಚ್‍ಡಿಕೆ ನೀಡಿದ್ದ ಸಚಿವ ಸ್ಥಾನದ ಆಫರನ್ನು ಜಾರಕಿಹೊಳಿ ತಿರಸ್ಕರಿಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಇಂದು ಶಾಸಕ ಮಹೇಶ್ ಕುಮಟಳ್ಳಿ ಅವರೊಂದಿಗೆ ಮಾತುಕತೆ ನಡೆಸಿ, ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳದಂತೆ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವ ಆಫರನ್ನು ಸಿಎಂ ಕುಮಾರಸ್ವಾಮಿ ಅವರು ಮುಂದಿಟ್ಟಿದ್ದರು ಎನ್ನಲಾಗಿತ್ತು. ಆದರೆ ರಮೇಶ್ ಜಾರಕಿಹೊಳಿ ಅವರು ಮಾತ್ರ ತಮ್ಮ ಹಠವನ್ನು ಸಡಿಲ ಮಾಡದೇ ಆಫರ್ ತಿರಸ್ಕರಿಸಿದ್ದಾರೆ.
ನನಗೆ ಯಾವುದೇ ಮಂತ್ರಿಗಿರಿ ಬೇಡ, ನನ್ನ ತೀರ್ಮಾನ ಫೈನಲ್ ಆಗಿದೆ. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲ್ಲ. ನನ್ನ ದಾರಿ ನನಗೆ ಎಂದು ರಮೇಶ್ ಜಾರಕಿಹೊಳಿ ಅವರು ಮಹೇಶ ಕುಮಟಳ್ಳಿ ಮೂಲಕ ಸಿಎಂಗೆ ಸಂದೇಶ ರವಾನಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಇಂದು ವಿಧಾನಸೌಧದಲ್ಲಿ ಮಹೇಶ್ ಕುಮಟಳ್ಳಿ ಜೊತೆ ಸಿಎಂ ಎಚ್‍ಡಿ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಅವರು ಚರ್ಚೆ ನಡೆಸಿದ್ದರು. ಆ ಬಳಿಕ ಕುಮಟಳ್ಳಿ ಅವರು ನೇರ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿದ್ದರು. ಸದ್ಯ ರಮೇಶ್ ಅವರು ಸ್ಪಷ್ಟ ಸಂದೇಶ ರವಾನೆ ಮಾಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ನಡೆ ಕುತೂಹಲ ಮೂಡಿಸಿದೆ.
ಈ ಹಿಂದೆಯೂ ಕೂಡ ಸಿಎಂ ಎಚ್‍ಡಿಕೆ, ರಮೇಶ್ ಅವರ ಮನವೊಲಿಕೆಗೆ ಮುಂದಾಗಿದ್ದರು. ಆ ವೇಳೆಯೂ ರಮೇಶ್‍ಗೆ ಸಚಿವ ಸ್ಥಾನ ಅವಕಾಶ ನೀಡಿದ್ದ ಸಿಎಂ, ಜೆಡಿಎಸ್ ಪಕ್ಷದ ಖೋಟಾದಿಂದ ಸಚಿವ ಸ್ಥಾನ ನೀಡುವುದಾಗಿ ತಿಳಿಸಿದ್ದರು ಎನ್ನಲಾಗಿತ್ತು. ಈ ಸಂದರ್ಭದಲ್ಲಿ ಸಚಿವ ಡಿಕೆ ಶಿವಕುಮಾರ್ ಅವರು ಸಿಎಂ ವಿರುದ್ಧ ಅಸಮಾಧಾನಗೊಂಡಿದ್ದರು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿತ್ತು.