ಬೆಳಗಾವಿ/ಚಿಕ್ಕೋಡಿ: ಡಿಸಿಎಂ ಲಕ್ಷ್ಮಣ ಸವದಿ ಇಂದು ಅಥಣಿಯ ಶಾಸಕ ಮಹೇಶ್ ಕುಮಟಳ್ಳಿ ಬಗ್ಗೆ ಮಾತನಾಡಿದ್ದು ದುರ್ದೈವ ಎಂದು ಗೋಕಾಕ್ ಕ್ಷೇತ್ರದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ, ಲಕ್ಷ್ಮಣ ಸವದಿ ಮಾತನಾಡಿದ್ದರ ಬಗ್ಗೆ ನನಗೆ ಮಾಹಿತಿ ಇಲ್ಲ. ಒಂದು ವೇಳೆ ಮಾತನಾಡಿದ್ರೆ ಅದು ದುರ್ದೈವ. ಅಥಣಿ ಜನರು ತಿರಸ್ಕಾರ ಮಾಡಿದ್ದರೂ ಲಕ್ಷ್ಮಣ ಸವದಿ ಅವರಿಗೆ ಅಧಿಕಾರ ಸಿಕ್ಕಿದೆ. ರಾಜಕೀಯದಲ್ಲಿ ಯಾವಾಗ ಏನು ಆಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ನಾವೆಲ್ಲ ಸರ್ಕಾರ ಬೀಳಬೇಕೆಂದು ರಾಜೀನಾಮೆ ನೀಡಿಲ್ಲ. ಅನ್ಯಾಯ ಆಗಿದ್ದರಿಂದ ರಾಜೀನಾಮೆ ನೀಡಿದ್ದು, ಬಿಜೆಪಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸವದಿ ನಿಂದನೆಗೆ ಕಣ್ಣೀರಿಟ್ಟ ಅನರ್ಹ ಶಾಸಕ ಕುಮುಟಳ್ಳಿ
ನಾನೋರ್ವ ಸಾಮಾನ್ಯ ಕಾರ್ಯಕರ್ತನಾಗಿದ್ದು, ಮಹೇಶ್ ಕುಮಟಳ್ಳಿ ಅವರನ್ನು ಅಥಣಿ ಜನರು ಗೆಲ್ಲಿಸಬೇಕಿದೆ. ಕಳೆದ ಏಳೆಂಟು ತಿಂಗಳನಿಂದ ಸುಪ್ರೀಂಕೋರ್ಟ್ ವಿಷಯದಲ್ಲಿ ತೊಡಗಿಕೊಂಡಿದ್ದರಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಕ್ಷೇತ್ರದ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದರು. ಇದನ್ನೂ ಓದಿ: ದರಿದ್ರ ಕುಮಟಳ್ಳಿ ಸುದ್ದಿ ತಗೊಂಡು ನಾನೇನ್ ಮಾಡ್ಲಿ- ಲಕ್ಷ್ಮಣ ಸವದಿ ಆಕ್ಷೇಪಾರ್ಹ ಮಾತು
ಸುಪ್ರೀಂಕೋರ್ಟ್ ಚುನಾವಣೆಯನ್ನು ಮುಂದೂಡಿದ್ದು, ಹಾಗಾಗಿ ಮುಂದಿನ ನಡೆಯ ಬಗ್ಗೆ ಚರ್ಚಿಸಲು ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಗಿದೆ. ಕೋರ್ಟ್ ತೀರ್ಪು ಬರೋವರೆಗೂ ಏನು ಮಾತನಾಡಲ್ಲ. ಯಾವ ಪಕ್ಷದಲ್ಲಿಯೂ ಇಂದು ನಾವಿಲ್ಲ. ಎಲ್ಲ ಅನರ್ಹ ಶಾಸಕರು ಒಂದೆಡೆ ಸೇರಿ ಮುಂದಿನ ನಿರ್ಧಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇದಕ್ಕಿಂತ ಹೆಚ್ಚಿನ ವಿಷಯಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಲಕ್ಷ್ಮಣ ಸವದಿ ಹೇಳಿದ್ದೇನು?
ಪ್ರವಾಹ ಪೀಡಿತ ಗ್ರಾಮಗಳಿಗೆ ಸಂತ್ರಸ್ತರ ಅಳಲು ಕೇಳಲು ಹೋಗುತ್ತಿದ್ದಾಗ ಮೊಬೈಲ್‍ನಲ್ಲಿ ಮಾತನಾಡುತ್ತಾ ಮುಂಜಾನೆ ಕುಮಟಳ್ಳಿ ಅಂತಹ ದರಿದ್ರ ಮಕ್ಕಳ ಹೆಸರು ನೆನಪಿಸಬೆಡಿ. ಅವನ ಸುದ್ದಿ ತಗೊಂಡ್ ನಾನೇನು ಮಾಡಲಿ. ನನ್ನ ಮೂಡ್ ಹಾಳು ಮಾಡಬೇಡಿ ಎಂದಿದ್ದಾರೆ.