ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬರುತ್ತಿದ್ದಂತೆ ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಶುರುವಾಗಿದ್ದು, ಕಾಂಗ್ರೆಸ್ ಅತೃಪ್ತ ಶಾಸಕರನ್ನು ಸೆಳೆಯಲು ಮತ್ತೆ ರಮೇಶ್ ಜಾರಕಿಹೊಳಿ ಫೀಲ್ಡ್ ಗಿಳಿದಿದ್ದಾರ ಎಂಬ ಮಾತು ಕೇಳಿ ಬರುತ್ತಿದೆ.
ಇಂದು ಕಾಂಗ್ರೆಸ್ ಅತೃಪ್ತ ಶಾಸಕರೊಂದಿಗೆ ರಮೇಶ್ ಜಾರಕಿಹೊಳಿ ಬೆಂಗಳೂರಿನಲ್ಲಿ ಮಾತುಕತೆ ನಡೆಸಲಿದ್ದಾರೆ. ಅಷ್ಟೇ ಅಲ್ಲದೆ ಈಗಾಗಲೇ ರಮೇಶ್ ಜಾರಕಿಹೊಳಿ ಬಳಿ 9 ಕಾಂಗ್ರೆಸ್ ಅತೃಪ್ತ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ರಮೇಶ್ ಜಾರಕಿಹೊಳಿ ಆಪರೇಷನ್ ಕಮಲದ ಪ್ರಯತ್ನ ಮಾಡಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಇದೀಗ ಮತ್ತೆ ರಮೇಶ್ ಜಾರಕಿಹೊಳಿ ಅತೃಪ್ತ ಶಾಸಕರನ್ನು ಸೆಳೆಯಲು ಮುಂದಾಗಿದ್ದಾರೆ.
ಇದಕ್ಕೂ ಮುನ್ನ ಯಡಿಯೂರಪ್ಪ ಅವರು ಅತೃಪ್ತ ಶಾಸಕರ ಕೈಯಿಂದ ಮೊದಲು ರಾಜೀನಾಮೆ ಕೊಡಿಸಿ ಆಮೇಲೆ ನಮ್ಮ ಬಳಿ ಬಂದು ಮಾತನಾಡಿ ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ರಮೇಶ್ ಜಾರಕಿಹೊಳಿ ಅವರು ಶಾಸಕರೊಂದಿಗೆ ಸಭೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈಗಾಗಲೇ ಹಾಲಿ ಮತ್ತು ಮಾಜಿ ಕಾಂಗ್ರೆಸ್ ಶಾಸಕರೇ ರಮೇಶ್ ಜಾರಕಿಹೊಳಿಗೆ ಫೋನ್ ಮಾಡಿ ಸಭೆ ಸೇರಿ ಮಾತನಾಡೋಣ ಎಂದು ಹೇಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಂಕಿ ಅಂಶದ ಪ್ರಕಾರ ಬೆಳಗಾವಿಯಲ್ಲಿಯೇ ರಮೇಶ್ ಜಾರಕಿಹೊಳಿ ಸೇರಿದಂತೆ ನಾಲ್ವರು ಅತೃಪ್ತ ಶಾಕರಿದ್ದಾರೆ. ಇಂದು ಸಂಜೆ ಸುಮಾರು 5 ಗಂಟೆಗೆ ಸಭೆ ಸೇರಿ ಚರ್ಚೆ ಮಾಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.