-ಸಚಿವರು ಸರ್ಕಾರಿ ಕಾರ್ ಬಳಸ್ತಿಲ್ಲ ಯಾಕೆ?
ಬೆಳಗಾವಿ: ದೇವರಲ್ಲಿ ನನ್ನ ಬೇಡಿಕೆ ಮುಂದಿಟ್ಟಿದ್ದು, ಅದು ಆಗುವವರೆಗೂ ನಾನು ಸಚಿವ ಸಂಪುಟ ಸಭೆಗೆ ಹಾಜರಾಗುವುದಿಲ್ಲ ಎಂದು ಪೌರಾಡಳಿತ ಮತ್ತು ಬಂದರು ಒಳನಾಡು ಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲಾ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ಇದುವರೆಗೂ 5 ಸಚಿವ ಸಂಪುಟ ಸಭೆಗೆ ಗೈರು ಹಾಜರಾಗಿದ್ದೇನೆ. ದೇವರಲ್ಲಿ ಏನೋ ಕೇಳಿಕೊಂಡಿದ್ದೇನೆ. ಅದು ಆಗುವವರೆಗೂ ಹೋಗಲ್ಲ. ಆದರೆ ಖಾತೆಯ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಪಕ್ಷ ಗ್ರಂಥಾಲಯ ಖಾತೆ ಕೊಟ್ಟರು ನಡೆಸಲು ಸಿದ್ಧ ಎಂದು ಹೇಳಿದರು.
ಇದೇ ವೇಳೆ ಸರ್ಕಾರಿ ವಾಹನ ಬಳಕೆ ಮಾಡದಿರುವ ಕುರಿತು ಸ್ಪಷ್ಟನೆ ನೀಡಿದ ಅವರು, ಕೆಲ ವಿಚಾರದಲ್ಲಿ ದೇವರಲ್ಲಿ ನಂಬಿಕೆ ಇಟ್ಟಿದ್ದೇನೆ. ಆ ಕೆಲಸ ಆಗುವವರೆಗೂ ಸರ್ಕಾರಿ ಕಾರು ಬಳಕೆ ಮಾಡುವುದಿಲ್ಲ ಎಂಬ ತೀರ್ಮಾನ ಮಾಡಿದ್ದೇನೆ. ಅಲ್ಲದೇ ಮುಂದಿನ ಸಚಿವ ಸಂಪುಟ ಸಭೆಗೂ ಗೈರು ಹಾಜರಾಗುತ್ತೇನೆ. ಕೆಲ ವಿಚಾರವನ್ನು ಮಾಧ್ಯಮಗಳ ಮುಂದೆ ಹೇಳುವುದಕ್ಕೆ ಹೋಗಲ್ಲ. ಸಚಿವ ಸ್ಥಾನಕ್ಕಿಂತ ಧಾರ್ಮಿಕ ನಂಬಿಕೆ ನನಗೆ ಮಹತ್ವ ಎಂದರು.
ಲೋಕಸಭಾ ಚುನಾವಣೆ ಕುರಿತ ಪ್ರಶ್ನೆಗಳಿಗೆ ಪಕ್ಷದ ಹೈಕಮಾಂಡ್ ಈ ಕುರಿತು ನಿರ್ಧಾರ ಮಾಡುತ್ತದೆ. ನಾನು ಸರ್ಕಾರದ ವಿರುದ್ಧ ಯಾವುದೇ ಅಸಮಾಧಾನ ಹೊಂದಿಲ್ಲ. ಆದರೆ ಕೆಲ ಸಮಸ್ಯೆಗಳ ಕುರಿತು ಪಕ್ಷದ ಮುಖಂಡರ ಮುಂದೇ ತಿಳಿಸಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವೆಲ್ಲವೂ ಸಾಮಾನ್ಯ. ಆದರೆ ನಾವು ಸಮಸ್ಯೆ ಬಗೆಹರಿಸುವ ಕಡೆ ಗಮನ ನೀಡಬೇಕೆ ಹೊರತು ಅದನ್ನು ದೊಡ್ಡದು ಮಾಡುವ ಹಾಗೇ ಮಾಡಬಾರದು ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv