ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತವೇನೋ ನಿಗದಿಯಾಯ್ತು. ಆದ್ರೆ ಸಾಕಷ್ಟು ಗೊಂದಲಗಳನ್ನು ಪರಿಹರಿಸಬೇಕಿದ್ದು, ಈ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ. ಸಿಎಂ ಇವತ್ತು ಗೋಕಾಕ್ ಶಾಸಕ ಮಿತ್ರಮಂಡಳಿ ನಾಯಕ ರಮೇಶ್ ಜಾರಕಿಹೊಳಿಯವರ ಜೊತೆ ಅರ್ಧ ಗಂಟೆ ಕಾಲ ತಮ್ಮ ಧವಳಗಿರಿ ನಿವಾಸದಲ್ಲಿ ಚರ್ಚೆ ನಡೆಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸದ್ಯ 10+3 ಸೂತ್ರದನ್ವಯ ಸಂಪುಟ ವಿಸ್ತರಣೆಗೆ ನಿರ್ಧರಿಸಲಾಗಿದೆ. ಈ ಸಂಬಂಧ ಮಿತ್ರಮಂಡಳಿ ಶಾಸಕರಿಗೆ ಮನವೊಲಿಕೆ ಮಾಡುವ ಅನಿವಾರ್ಯತೆ ಸಿಎಂ ಎದುರಿಗಿದೆ. ಹೀಗಾಗಿ ರಮೇಶ್ ಜಾರಕಿಹೊಳಿಯವರ ಜೊತೆ ಸಿಎಂ ಮಾತುಕತೆ ನಡೆಸಿದರು.
ಈಗಾಗಲೇ ಸಂಪುಟದಿಂದ ಶಾಸಕ ಮಹೇಶ್ ಕುಮಟಳ್ಳಿಯವರನ್ನು ಕೈಬಿಡುವ ಮಾತು ಬಲವಾಗಿ ಕೇಳಿಬರ್ತಿದೆ. ಮಹೇಶ್ ಕುಮಟಳ್ಳಿಗೆ ಮನವೊಲಿಸುವಂತೆ ಸಿಎಂ ಶಾಸಕ ರಮೇಶ್ ಜಾರಕಿಹೊಳಿಗೆ ಮನವಿ ಮಾಡಿದ್ದಾರೆ. ಮಹೇಶ್ ಗೆ ಪ್ರಭಾವಿ ನಿಗಮ ಮಂಡಳಿ ಕೊಡುವ ಪ್ರಸ್ತಾವನೆಯನ್ನು ಸಿಎಂ ಇಟ್ಟಿದ್ದಾರೆ ಎಂದು ಹೇಳಲಾಗಿದೆ.
ಆದ್ರೆ ಸಿಎಂ ಯಡಿಯೂರಪ್ಪ ಮತ್ತು ರಮೇಶ್ ಜಾರಕಿಹೊಳಿ ಮಧ್ಯೆ ನಡೆದ ಮಾತುಕತೆ ವೇಳೆ ಎರಡು ಪ್ರಬಲ ಬೇಡಿಕೆಗಳನ್ನು ರಮೇಶ್ ಜಾರಕಿಹೊಳಿ ಇಟ್ಟಿದ್ದಾರೆ ಎನ್ನಲಾಗಿದೆ. ತಮಗೆ ಜಲಸಂಪನ್ಮೂಲ ಖಾತೆಯನ್ನೇ ಕೊಡಬೇಕು ಎಂಬ ಮೊದಲ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ. ಡಿಕೆಶಿ ಬಳಿ ಇದ್ದ ಜಲಸಂಪನ್ಮೂಲ ಖಾತೆಗೆ ಕೊಡಿ ಎಂದು ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಇನ್ನು ವಿಧಾನಸೌಧದಲ್ಲಿ ಡಿಕೆಶಿ ಇದ್ದ ಕೊಠಡಿಯೇ ಬೇಕು ಎಂದೂ ತಮ್ಮ ಎರಡನೇ ಬೇಡಿಕೆ ಇಟ್ಟಿದ್ದಾರಂತೆ ರಮೇಶ್ ಜಾರಕಿಹೊಳಿ. ಮೈತ್ರಿ ಸರ್ಕಾರದಲ್ಲಿ ವಿಧಾನಸೌಧದಲ್ಲಿ ಡಿಕೆಶಿ ಇದ್ದ ಕೊಠಡಿ ಸಂಖ್ಯೆಗಳು 336 ಮತ್ತು 337. ಇವೇ ಕೊಠಡಿಗಳು ತಮಗೂ ಬೇಕೆಂದು ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರಂತೆ. ಈಗಾಗಲೇ ತಮ್ಮ ಆಪ್ತ ಸಹಾಯಕನ ಮೂಲಕ ಈ ಕೊಠಡಿಗಳ ಪರಿಶೀಲನೆಯನ್ನೂ ನಡೆಸಿದ್ದಾರಂತೆ.
ಇನ್ನು ಮಹೇಶ್ ಕುಮಟಳ್ಳಿಗೆ ಮನವೊಲಿಸುವ ಹೊಣೆಯನ್ನು ರಮೇಶ್ ಜಾರಕಿಹೊಳಿ ಹೊತ್ತುಕೊಂಡಿದ್ದಾರೆ ಎನ್ನಲಾಗಿದೆ. ಮಹೇಶ್ ಕುಮಟಳ್ಳಿ ಬಗ್ಗೆ ಟೆನ್ಷನ್ ತಗೋಬೇಡಿ. ಅವರನ್ನು ನಾನು ಸಂಬಾಳಿಸ್ತೇನೆ ಅಂತ ಸಿಎಂಗೆ ರಮೇಶ್ ಜಾರಕಿಹೊಳಿ ಮಾತು ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಮಹೇಶ್ ಕುಮಟಳ್ಳಿ ಒಪ್ಕೋತಾರೆ. ಅದರಲ್ಲಿ ಅನುಮಾನ ಇಲ್ಲ. ಆದ್ರೆ ನನ್ನ ಈ ಬೇಡಿಕೆಗಳನ್ನು ಮೊದಲು ಈಡೇರಿಸಿ ಎಂದು ರಮೇಶ್ ಜಾರಕಿಹೊಳಿ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ಆದರೆ ರಮೇಶ್ ಜಾರಕಿಹೊಳಿಯವರ ಎರಡೂ ಬೇಡಿಕೆಗಳ ಕುರಿತಾಗಿ ಸಿಎಂ ಯಾವುದೇ ಸ್ಪಷ್ಟ ಭರವಸೆ ಕೊಟ್ಟಿಲ್ಲ ಎನ್ನಲಾಗಿದೆ. ರಮೇಶ್ ಜಾರಕಿಹೊಳಿಗೆ ಸಿಗುತ್ತಾ ಜಲಸಂಪನ್ಮೂಲ ಖಾತೆ ಅನ್ನೋದರ ಬಗ್ಗೆ ತಕ್ಷಣಕ್ಕೆ ನಿರ್ಧಾರ ಕೈಗೊಳ್ಳಲ್ಲ ಎನ್ನಲಾಗಿದೆ. ಯಾಕೆಂದರೆ ಇದೇ ಜಲಸಂಪನ್ಮೂಲ ಖಾತೆಗೆ ಬಸವರಾಜ್ ಬೊಮ್ಮಾಯಿ ಸಹ ಪಟ್ಟು ಹಿಡಿದು ಕೂತಿದ್ದಾರೆ. ಹೀಗಾಗಿ ಸಿಎಂ ರಮೇಶ್ ಜಾರಕಿಹೊಳಿಗೆ ಯಾವುದೇ ಭರವಸೆ ಕೊಟ್ಟಿಲ್ಲ. ಕೇವಲ ಚರ್ಚಿಸಿ ತಿಳಿಸ್ತೇನೆ ಅಂತಷ್ಟೇ ಸಿಎಂ ತಿಳಿಸಿದ್ದಾರೆ ಎನ್ನಲಾಗಿದೆ.