ಬೆಂಗಳೂರು: ಕಾಂಗ್ರೆಸ್ ಪಕ್ಷ ಬಿಡಲು ಮುಂದಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈಗ ಏಕಾಂಗಿಯಾಗಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಯಾಕಂದ್ರೆ ಅತೃಪ್ತ ಶಾಸಕರು ಮುಂದೆ ಹೋಗಿ ಹಿಂದೆ ಬರುತ್ತೀವಿ ಎಂದಿದ್ದರು. ಆದರೆ ಇದೀಗ ರಮೇಶ್ ಜಾರಕಿಹೊಳಿ ಜೊತೆ ಗುರುತಿಸಿಕೊಳ್ಳೋದಕ್ಕೆ ಅವರೇ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಅತೃಪ್ತ ಶಾಸಕರನ್ನು ನಂಬಿಕೊಂಡು ರಮೇಶ್ ಜಾರಕಿಹೊಳಿ ಕೈ ಸುಟ್ಟುಕೊಂಡರಾ ಎಂಬ ಅನುಮಾನ ಮೂಡಿದೆ.
ಸಂಭವನೀಯ ಬಂಡಾಯಗಾರರು ಫಲಿತಾಂಶ ಪ್ರಕಟ ಆಗುವವರೆಗೂ ನೀವು ಸುಮ್ಮನಿದ್ದು ಬಿಡಿ ಎಂದು ಜಾರಕಿಹೊಳಿಗೆ ಸಲಹೆ ನೀಡಿದ್ದಾರೆ. ಶಾಸಕರ ಮಾತು ಕೇಳಿ ಶಾಕ್ ಆದ ರಮೇಶ್ ಜಾರಕಿಹೊಳಿಗೆ ಈಗ ಶಾಸಕರಾದ ನಾಗೇಂದ್ರ, ಮಹೇಶ್ ಕುಮಟಳ್ಳಿ, ನಾಗೇಶ್ ಯಾರು ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ರಮೇಶ್ ಜಾರಕಿಹೋಳಿ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದು, ರಾಜೀನಾಮೆ ಕೊಡಬೇಕಾ ಬೇಡವಾ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ.
Advertisement
Advertisement
ನಾಗೇಂದ್ರ ತನ್ನ ಸಹೋದರನನ್ನ ಬಿಜೆಪಿಗೆ ಕಳುಹಿಸಿದ್ದರೂ ಎಂಪಿ ಟಿಕೆಟ್ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರನ್ನು ನಂಬಿ ಎಡವಟ್ಟು ಮಾಡಿಕೊಳ್ಳುವುದು ಬೇಡ ಎಂದು ಹಿಂದೇಟು ಹಾಕಿದ್ದಾರೆ. ಮಹೇಶ್ ಕುಮಟಳ್ಳಿಗೆ ಸಾಹುಕಾರನ ಮೇಲೆ ಪ್ರೀತಿ, ಕ್ಷೇತ್ರದ ಮೇಲೆ ಆಸೆ ಎಂಬಂತಾಗಿದೆ. ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದರೆ ಸಹೋದರರ ಸವಾಲ್ ಮಧ್ಯೆ ಪುನಃ ಗೆಲುವು ಕಷ್ಟ ಅನ್ನೋದು ಮಹೇಶ್ ಕುಮಟಳ್ಳಿಯವರ ಆತಂಕವಾಗಿದೆ ಎನ್ನಲಾಗಿದೆ.
Advertisement
ಇತ್ತ ನಾನೊಬ್ಬನೇ ರಾಜೀನಾಮೆ ನೀಡಲ್ಲ. ಗುಂಪಿನಲ್ಲಿ ರಾಜೀನಾಮೆ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದ ರಮೇಶ್ ಜಾರಕಿಹೊಳಿಗೆ ಒಬ್ಬರು ಜೊತೆಯಲ್ಲಿಲ್ಲದೆ ಆತಂಕ ಶುರುವಾಗಿದೆ. ಶ್ರೀಮಂತ ಪಾಟೀಲ್, ಶಾಸಕ ನಾಗೇಶ್, ಶಂಕರ್, ಬಿ.ಸಿ.ಪಾಟೀಲ್ ಯಾರು ಸಹ ಕ್ಯಾರೇ ಅನ್ನುತ್ತಿಲ್ಲ. ಇತ್ತ ರಮೇಶ್ ಜಾರಕಿಹೊಳಿ ಮನವೊಲಿಕೆಗೆ ಮುಂದಾದ ಕಾಂಗ್ರೆಸ್ ರಾಜೀನಾಮೆ ಕೊಟ್ಟು ಹೋಗೋದಾದರೆ ಹೋಗಲಿ ಎಂಬ ತೀರ್ಮಾನಕ್ಕೆ ಬಂದು ಸೈಲೆಂಟಾಗಿದೆ. ಹೀಗಾಗಿ ರಮೇಶ್ ಜಾರಕಿಹೊಳಿ ಸದ್ಯಕ್ಕೆ ಏಕಾಂಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.