ಬೆಂಗಳೂರು: ಕಾಂಗ್ರೆಸ್ ನಾಯಕರ ಅಜ್ಮೇರ್ ಯಾತ್ರೆಗೂ ಪೊಲಿಟಿಕಲ್ ಟ್ವಿಸ್ಟ್ ಸಿಕ್ಕಿದ್ದು ಹೈಕಮಾಂಡ್‍ಗೆ ದೂರು ದಾಖಲಾಗಿದೆ.
ಮಂಗಳವಾರ ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ ರಮೇಶ್ ಜಾರಕಿಹೊಳಿ, ಸಂಸದ ಬಿ.ವಿ.ನಾಯಕ್, ವಿಧಾನ ಪರಿಷತ್ ಸದಸ್ಯ ವೀರಕುಮಾರ್ ಪಾಟೀಲ್, ಶಾಸಕರಾದ ಶ್ರೀಮಂತ ಕುಮಾರ್ ಪಾಟೀಲ್, ಬಳ್ಳಾರಿಯ ಬಿ.ನಾಗೇಂದ್ರ, ಗಣೇಶ್, ಭೀಮಾನಾಯಕ್, ತುಕಾರಾಂ, ಬಿ.ನಾರಾಯಣರಾವ್ ಸೇರಿದಂತೆ 13 ಮಂದಿ 5 ದಿನಗಳ ಅಜ್ಮೇರ್ ದರ್ಗಾ ಪ್ರವಾಸ ಕೈಗೊಂಡಿದ್ದಾರೆ. ಹರಕೆ ಪ್ರವಾಸ ಎಂದು ನಾಯಕರು ಹೇಳಿಕೊಳ್ಳುತ್ತಿದ್ದರೂ ಇದು ಶಕ್ತಿ ಪ್ರದರ್ಶನಕ್ಕೆ ಆಯೋಜಿಸಲಾದ ಪ್ರವಾಸ ಎನ್ನುವ ಮಾತು ಕೈ ವಲಯದಿಂದಲೇ ಕೇಳಿ ಬಂದಿದೆ.
Advertisement
ನಾಯಕರು ಅಜ್ಮೇರ್ ಪ್ರವಾಸಕ್ಕೆ ತೆರಳಿದ ವಿಚಾರಕ್ಕೆ ಸಂಬಂಧಿಸಿದಂತೆ ದೂರು ಬಂದ ಹಿನ್ನೆಲೆಯಲ್ಲಿ ಈ ವಿಚಾರವನ್ನು ಉಸ್ತುವಾರಿ ವೇಣುಗೋಪಾಲ್ ಗಂಭೀರವಾಗಿದೆ ಪರಿಗಣಿಸಿದ್ದಾರೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‍ಗೆ ದೂರವಾಣಿ ಕರೆ ಮಾಡಿರುವ ವೇಣುಗೋಪಾಲ್ ಯಾವ ಕಾರಣಕ್ಕೆ ರಮೇಶ್ ಜಾರಕಿಹೊಳಿ ನೇತೃತ್ವದ ತಂಡ ಒಟ್ಟಾಗಿ ಹೋಗಿದೆ? ನಿಮ್ಮ ಗಮನಕ್ಕೆ ತಂದು ಪ್ರವಾಸ ಹೋಗಿರುವರೇ ಎನ್ನುವ ಪ್ರಶ್ನೆಗಳಿಗೆ ಇಂದು ಸಂಜೆಯೊಳಗಾಗಿ ವರದಿ ನೀಡಬೇಕು ಎಂದು ಸೂಚಿಸಿದ್ದಾರೆ.
Advertisement
Advertisement
ಶಕ್ತಿ ಪ್ರದರ್ಶನ ಏನಕ್ಕೆ?
ಆಷಾಢ ಬಳಿಕ ಸಂಪುಟ ವಿಸ್ತರಣೆಯಾಗಲಿದ್ದು, ಜಿಲ್ಲೆಗೆ ಒಬ್ಬರಿಗೆ ಮಾತ್ರ ಮಂತ್ರಿಗಿರಿಯನ್ನು ಹೈಕಮಾಂಡ್ ನೀಡಲಿದೆ. ಹೀಗಾಗಿ ಮಾಜಿ ಸಚಿವ ಸತೀಶ್ ಜಾರಕಿಹೊಳಿಗೆ ಮಂತ್ರಿಗಿರಿ ನೀಡಿದರೆ ತಮ್ಮ ಸ್ಥಾನಕ್ಕೆ ಕುತ್ತು ಬರುತ್ತದೆ ಎಂದು ಅರಿತ ರಮೇಶ್ ಜಾರಕಿಹೊಳಿ ಪ್ರವಾಸದ ನೆಪದಲ್ಲಿ ಕಾಂಗ್ರೆಸ್ ನಾಯಕರಿಗೆ ತಮಗಿರುವ ಬೆಂಬಲ ತಿಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಸಚಿವರ ನೇತೃತ್ವದ ತಂಡವು ಬಿಜೆಪಿ ಶಾಸಕ ಶ್ರೀರಾಮುಲು ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಕೆಲವು ನಾಯಕರು ಕೆ.ಸಿ.ವೇಣುಗೋಪಾಲ್‍ಗೆ ಈ ಹಿಂದೆ ದೂರು ನೀಡಿದ್ದರು. ಹೀಗಾಗಿಯೇ ಕಾಂಗ್ರೆಸ್ಸಿನಲ್ಲಿ ರಮೇಶ್ ಜಾರಕಿಹೊಳಿ ಪ್ರವಾಸ ಗೊಂದಲಕ್ಕೆ ಕಾರಣವಾಗಿದೆ. ತನ್ನನ್ನ ಕಾಂಗ್ರೆಸ್ಸಿನಲ್ಲಿ ಕಡೆಗಣಿಸಿದರೆ ನನ್ನ ಜೊತೆಗೆ ಶಾಸಕರು ಇದ್ದಾರೆ ಎನ್ನುವ ಸಂದೇಶವನ್ನು ಹೈಕಮಾಂಡಿಗೆ ರವಾನಿಸಿ ಮಂತ್ರಿಗಿರಿ ಉಳಿಸಿಕೊಳ್ಳಲು ರಮೇಶ್ ಜಾರಕಿಹೊಳಿ ಈ ತಂತ್ರ ಹೂಡಿದ್ದಾರೆ ಎನ್ನಲಾಗಿದೆ.