ಈಗಾಗಲೇ ಟೀಸರ್ ನಿಂದ ಕುತೂಹಲ ಕೆರಳಿಸಿರುವ ಸೂಪರ್ ನ್ಯಾಚುರಲ್ ಥ್ರಿಲ್ಲರ್ ದೈಜಿ (Daiji) ಸಿನಿಮಾ ತಂಡವು ಮಹತ್ತರವಾದ ಚಿತ್ರೀಕರಣ ಒಂದನ್ನು ಭಾರತದ ಅತ್ಯಂತ ಪ್ರಾಚೀನ, ಅಧ್ಯಾತ್ಮಿಕ ನಗರವಾದ ವಾರಣಾಸಿಯಲ್ಲಿ (Varanasi) ಚಿತ್ರೀಕರಿಸಿಕೊಂಡು ಹಿಂದಿರುಗಿದೆ. ವಾರಾಣಸಿಯ, ಅಲೌಕಿಕತೆ, ಅಧ್ಯಾತ್ಮಿಕತೆ, ಅಲ್ಲಿನ ಘಾಟ್ ಗಳು, ಅಲ್ಲಿಯ ಕಾಲಾತೀತತೆಯಿಂದ ಕೂಡಿದ ಜೀವನ ಇವುಗಳು ದೈಜಿ ಸಿನೆಮಾದ ಮುಖ್ಯ ವಿಷಯವಾದ ಅಗೋಚರ, ಅತೀಂದ್ರಿಯ ಶಕ್ತಿ, ನಂಬಿಕೆ, ಮನುಷ್ಯನ ಕಾಡುವ ಈ ಶಕ್ತಿಗಳ ಬಗೆಗಿನ ಕಥೆಗೆ ಸರಿಯಾದ ಒಂದು ವಾತಾವರಣ ಒದಗಿಸಿ ಕೊಟ್ಟಿತು. ಶಿವಾಜಿ ಸುರತ್ಕಲ್ 1 ಮತ್ತು 2 ಯಶಸ್ವಿ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಆಕಾಶ್ ಶ್ರೀವತ್ಸ ರವರ ನಿರ್ದೇಶನ ಹಾಗೂ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ನ ಅಡಿಯಲ್ಲಿ ನಿರ್ಮಿಸುತ್ತಿರುವ ನಿರ್ಮಾಪಕ ರವಿ ಕಶ್ಯಪ್ ರವರ ಈ ಸಿನಿಮಾ ದೈಜಿ ನೈಜ ಘಟನೆ ಆಧಾರಿತ ಚಿತ್ರವಾಗಿದ್ದು ಇದು ಮನುಷ್ಯ ಹಾಗೂ ಅಲೌಕಿಕ, ಅತೀಂದ್ರಿಯ, ಅಗೋಚರ ಶಕ್ತಿಗಳ ನಡುವಿನ ಸಂಕೀರ್ಣ ಸಂಬಂಧಗಳ ಅನ್ವೇಷಣೆಯೇ ಇದರ ತಿರುಳು.
ಚಿತ್ರತಂಡವು ಸತತವಾಗಿ ಮೂರು ದಿನಗಳ ಕಾಲ ರಾತ್ರಿಯಲ್ಲಿ ಚಿತ್ರೀಕರಣ ಮಾಡಿದ್ದು, ಇಲ್ಲಿಯ ಘಾಟ್ ಗಳು, ಸಣ್ಣ ಸಣ್ಣ ಓಣಿಗಳು, ಗಂಗಾರತಿ, ಅಧ್ಯಾತ್ಮಿಕತೆಯಿಂದ ಕೂಡಿದ ಭಕ್ತ ಸಮೂಹದ ಅನಿಯಂತ್ರಿತ ವಾತವರಣದಲ್ಲೇ, ಜನಜಂಗುಳಿಗಳ ಮಧ್ಯೆ ಸಿನಿಮಾದ ಮಹತ್ತರದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈ ರೀತಿಯ ಚಿತ್ರೀಕರಣದಿಂದ ಸಿನಿಮಾಗೆ ಬೇಕಾದ ಕಚ್ಚಾ, ವೈವಿಧ್ಯಮಯ ಹಾಗೂ ರೋಮಾಂಚಕತೆಯ ದೃಶ್ಯಾವಳಿಗಳು ದೈಜಿ ಕಥೆಗೆ ಸರಿಯಾಗಿ ಹೊಂದುವ ವಾತಾವರಣ ಲಭ್ಯವಾಗಿಸಿತು. ಇದೇ ಸಂದರ್ಭದಲ್ಲಿ ದೈಜಿ ತಂಡಕ್ಕೆ ಮತ್ತೋರ್ವ ಕಲಾವಿದರಾದ, ಕನ್ನಡ ಸಿನಿಮಾದ ಹೆಸರಾಂತ ನಿರ್ದೇಶಕ ಗುರು ದೇಶಪಾಂಡೆಯವರು ಚಿತ್ರೀಕರಣದಲ್ಲಿ ಅತಿಥಿ ಪಾತ್ರದಲ್ಲಿ ಪಾಲ್ಗೊಂಡರು. ರಾಜಾ ಹುಲಿ, ರುದ್ರತಾಂಡವದಂತಹ ಅನೇಕ ಸಿನಿಮಾಗಳನ್ನು ನಿರ್ದೇಶಿಸಿರುವ ಗುರು ದೇಶಪಾಂಡೆಯವರು, ಈ ಚಿತ್ರದಲ್ಲಿ ಕಥಯ ಓಘಕ್ಕೆ ಹೊಂದುಕೊಂಡಂತೆ, ಅದಕ್ಕೆ ಮಹತ್ತರವಾದ ತಿರುವನ್ನು ತಂದುಕೊಡುವಂತಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರವು ಅಗೋಚರ, ಅಲೌಕಿಕ ಶಕ್ತಿಗಳ ವಿವಿಧ ತಿರುಳುಗಳನ್ನು ಪರಿಚಯಿಸುವ, ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರುವ ಒಂದು ಪಾತ್ರವಾಗಿ ಹೊರಹೊಮ್ಮುವುದರಲ್ಲಿ ಅನುಮಾನವಿಲ್ಲ.
ದೈಜಿ ಸಿನಿಮಾವು ಜನರ ಮನಸ್ಸಿನಲ್ಲಿ ಅತೀ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಕನ್ನಡದ ಸಿನಿಮಾಗಳಲ್ಲಿ ಒಂದು ಎಂಬುದು ಈಗಾಗಲೇ ಟೀಸರ್ ನಿಂದ ತಂಡ ತೋರಿಸಿಕೊಟ್ಟಿದೆ. ದೈಜಿ ಬರೀ ಚಾಣಾಕ್ಷ ಚಿತ್ರಕಥೆಯಷ್ಟೇ ಅಲ್ಲದೇ ಇದರ ಚಿತ್ರೀಕರಣವು ಭಾರತದ ವಿವಿಧ ರಾಜ್ಯ, ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ಯುನೈಟೆಡ್ ಕಿಂಗ್ಡಮ್ ಗಳಲ್ಲಿ ನಡೆದಿದ್ದು ಇದರ ಕಥೆಯು ಆಳ ಹಾಗೂ ವಿಸ್ತಾರತೆಯಿಂದ ಕೂಡಿದೆ ಎನ್ನುವುದು ಸ್ಪಷ್ಟ. ಈ ಸಿನೆಮಾದ ತಾರಾಗಣ ಕೂಡ ಕುತೂಹಲಕಾರಿಯಾಗಿದೆ. ರಮೇಶ್ ಅರವಿಂದ್ (Ramesh Aravind) ಹಾಗೂ ರಾಧಿಕಾ ನಾರಾಯಣ್(Radhika Narayan) ಅವರ ಅದ್ಭುತ ಹಾಗೂ ಮನೋಜ್ಞ ನಟನೆಯು ಭಾವನಾತ್ಮಕ, ಸಸ್ಪೆನ್ಸ್, ರೋಮಾಂಚಕತೆಯ ಈ ಚಿತ್ರಕ್ಕೆ ಭದ್ರ ಬುನಾದಿಯಾಗಿದೆ. ತಾರಾಗಣದಲ್ಲಿ ದಿಗಂತ್ ಮಂಚಾಲೆ, ಅವಿನಾಶ್ ಯೆಳಂದೂರ್, ನಿಧಿ ಹೆಗ್ಡೆ, ಶ್ರೀಧರ್ ಕೊಣನೂರ್, ಬಿ.ಎಂ.ಗಿರಿರಾಜ್ ರವರು ಮುಖ್ಯ ಭೂಮಿಕೆಯಲ್ಲಿದ್ದರೆ, ಇನ್ನೂ ಹಾಲಿವುಡ್ ನಲ್ಲಿ ನಟಿಸಿರುವ ನಟರಾದ ಸ್ಯಾಂಡಿ ಹಿಗಿನ್ಸ್, ಸಾಲ್ ಯೂಸುಫ್, ಎಲ್ಲೆನ್ ಶಂಬರ್ಲಿಯನ್, ಫ್ಲೋರೆನ್ಶಿಯಾ ಮಾರ್ಟಿನೆಜ಼ ರವರು ಮುಖ್ಯ ಪಾತ್ರದಲ್ಲಿದ್ದಾರೆ, ಅಷ್ಟೇ ಅಲ್ಲದೇ ಮಿಸ್ ಐರ್ಲೆಂಡ್ ಅಲೆಕ್ಸಾಂಡ್ರಾ ಟೇಲರ್ ಈ ಚಿತ್ರದ ಅತೀ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು, ಈ ಸಿನೆಮಾದ ಕಥೆಯ ವಿಸ್ತಾರತೆ, ಅಂತರರಾಷ್ಟ್ರೀಯ ಮಟ್ಟದ ಮಹತ್ವವನ್ನು ತೋರುತ್ತದೆ.
ದೈಜಿ ಗೆ ಶ್ರೀಶ ಎಮ್. ಕುದುವಳ್ಳಿಯವರ ಛಾಯಾಗ್ರಹಣವಿದ್ದು, ಜುಡಾ ಸ್ಯಾಂಡಿ ಅವರ ಹಿನ್ನೆಲೆ ಸಂಗೀತವಿದೆ. ಗಟ್ಟಿಯಾದ ಚಿತ್ರಕಥೆ, ಜಾಗತಿಕ ತಾರಾಗಣ, ಅದ್ಭುತ ಸನ್ನಿವೇಶಗಳಿಂದ ಕೂಡಿದ ದೈಜಿ ಚಿತ್ರವು ಕನ್ನಡದ ಬಹುನಿರೀಕ್ಷಿತ ಚಿತ್ರವಾಗಿ ಹೊರಹೊಮ್ಮಿದೆ. ವಾಸ್ತವಿಕತೆ ಹಾಗೂ ಅತೀಂದ್ರಿಯ ಶಕ್ತಿಗಳ ನಡುವಿನ ಸಂಘರ್ಷವು ವೀಕ್ಷಕರಿಗೆ ಒಳ್ಳೆಯ ಚಿತ್ರ ನೀಡುವಲ್ಲಿ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ದೈಜಿ ಸಿನಿಮಾಗೆ ಕೇವಲ ಎರಡು ದಿನಗಳ ಚಿತ್ರೀಕರಣ ಉಳಿದಿದ್ದು, ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ಪ್ರಾರಂಭವಾಗಿದೆ.


