ಬೆಂಗಳೂರು: ಕನ್ನಡದ ಕೋಟ್ಯಾಧಿಪತಿ ಮೂರನೇ ಆವೃತ್ತಿ ಬರುತ್ತಿದ್ದು, ರಮೇಶ್ ಅರವಿಂದ್ ನಿರೂಪಣೆ ಮಾಡುತ್ತಿದ್ದಾರೆ. ಶುಕ್ರವಾರ ಕಾರ್ಯಕ್ರಮವನ್ನು ಲಾಂಚ್ ಮಾಡಿದ್ದು, ಮೊದಲ ಸ್ಪರ್ಧಿ ಯಾರೆಂಬುದನ್ನು ನಟ ರಮೇಶ್ ಅರವಿಂದ್ ತಿಳಿಸಿದ್ದಾರೆ.
ಕನ್ನಡದ ಕೋಟ್ಯಾಧಿಪತಿ 2ನೇ ಆವೃತ್ತಿಯನ್ನು ನಿರೂಪಣೆ ಮಾಡಿದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರೇ ಮೂರನೇ ಆವೃತ್ತಿಯ ಮೊದಲ ಸ್ಪರ್ಧಿ ಆಗಬೇಕೆಂದು ರಮೇಶ್ ಆಸೆ ಪಡುತ್ತಿದ್ದಾರೆ. ಪುನೀತ್ ರಾಜ್‍ಕುಮಾರ್ ಮೂಲಕ ಈ ಕಾರ್ಯಕ್ರಮ ಶುಭಾರಂಭ ಆಗಬೇಕೆಂದು ರಮೇಶ್ ಅರವಿಂದ್ ಬಯಸಿದ್ದಾರೆ.
ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಿರೂಪಕಿ, ನೀವು ಈ ಕಾರ್ಯಕ್ರಮದ ಮೊದಲ ಸಂಚಿಕೆ ಹಾಟ್ ಸೀಟ್ ಮೇಲೆ ಯಾರನ್ನು ನೋಡಲು ಇಷ್ಟಪಡುತ್ತೀರಾ ಎಂದು ಪ್ರಶ್ನೆ ಮಾಡಿದ್ರು. ಈ ವೇಳೆ ನಿರೂಪಕಿ ರಾಜ್ಯದ ಮುಖ್ಯಮಂತ್ರಿಗಳು, ಪತ್ರಕರ್ತರು, ಸಿನಿಮಾ ಕಲಾವಿದರ ಹಾಗೂ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಮೊದಲು ಪರಿಚಯಿಸಿದವರ ಹೆಸರನ್ನು ಆಯ್ಕೆಗಳನ್ನಾಗಿ ರಮೇಶ್ ಅರವಿಂದ್ ಅವ್ರಿಗೆ ನೀಡಿದ್ದರು.
ನಿರೂಪಕಿಯ ಪ್ರಶ್ನೆಗೆ ರಮೇಶ್, “ನಾನು ವೀಕೆಂಡ್ ವಿಥ್ ರಮೇಶ್” ಕಾರ್ಯಕ್ರಮದಲ್ಲಿ ಮೊದಲ ಸಂಚಿಕೆಯಲ್ಲಿ ಬಂದ ವ್ಯಕ್ತಿಯನ್ನೇ ಕನ್ನಡದ ಕೋಟ್ಯಾಧಿಪತಿಯ ಹಾಟ್ ಸೀಟ್‍ನಲ್ಲಿ ನೋಡಲು ಇಷ್ಟಪಡುತ್ತೇನೆ. ಅದು ಬೇರೆ ಯಾರೂ ಅಲ್ಲ ಪುನೀತ್ ರಾಜ್‍ಕುಮಾರ್ ಎಂದು ಉತ್ತರಿಸಿದ್ದಾರೆ.
ಕನ್ನಡದ ಕೋಟ್ಯಾಧಿಪತಿ ಮಾಡುತ್ತಿರುವುದರ ಬಗ್ಗೆ ರಮೇಶ್, ಪುನೀತ್ ರಾಜ್‍ಕುಮಾರ್ ಅವರಿಗೆ ಮೆಸೇಜ್ ಮಾಡಿದ್ದಾರೆ. ಆ ಮೆಸೇಜ್ ನೋಡಿದ ತಕ್ಷಣ ಪುನೀತ್, ರಮೇಶ್ ಅರವಿಂದ್ ಅವರಿಗೆ ಫೋನ್ ಮಾಡಿದ್ದಾರೆ.
ನೀವು ಕಾರ್ಯಕ್ರಮ ನಡೆಸಿಕೊಡುತ್ತಿರುವುದು ತುಂಬ ಖುಷಿ ಆಯಿತು ಎಂದು ಪುನೀತ್ ಸಂತೋಷದಿಂದ ಶುಭ ಹಾರೈಸಿದ್ದಾರೆ. ಸಿನಿಮಾಗಳ ಕೆಲಸದಿಂದಾಗಿ ಪುನೀತ್ ಈ ಬಾರಿ ಕಾರ್ಯಕ್ರಮವನ್ನು ನಿರೂಪಣೆ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.