ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಬೆನ್ನಲ್ಲೇ ದೂರದರ್ಶನವು ಮತ್ತೆ ರಾಮಾಯಣ (Ramayana) ಧಾರಾವಾಹಿಯನ್ನು ಪ್ರಸಾರ ಮಾಡಲು ಹೊರಟಿದೆ. ಇಂದಿನಿಂದ ಸಂಜೆ 6 ಗಂಟೆಗೆ ಮತ್ತು ಮರುದಿನ ಮಧ್ಯಾಹ್ನ 12ಕ್ಕೆ ಮರು ಪ್ರಸಾರ ವಾಗಲಿದೆ. ಪ್ರತಿ ದಿನವೂ ವೀಕ್ಷಕರು ರಾಮಾಯಣವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ರಾಮಾಯಣ. ಹೀಗಂದರೆ ಸಾಕು ಈಗಲೂ ಆ ದಿನಗಳು ನೆನಪಾಗುತ್ತವೆ. ಸುಮಾರು ಮೂವತ್ತಾರು ವರ್ಷಗಳ ಹಿಂದೆ ಭಾರತಿಯರ ಪಾಲಿಗೆ ದೈವಸ್ವರೂಪಿಯಂತೆ ಕಾಣಿಸಿದ ರಮಾನಂದ್ ಸಾಗರ್ ನಿರ್ದೇಶನದ ಆ ಮಹಾ ಧಾರಾವಾಹಿ (Serial). 1987ರಲ್ಲಿ ಅಂದಿನ ದೂರದರ್ಶನದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ ಪ್ರಸಾರವಾಗುತ್ತಿತ್ತು. ಆಗ ಈಗಿನಷ್ಟು ಟಿವಿ ಮತ್ತು ಚಾನೆಲ್‌ಗಳು ಇರಲಿಲ್ಲ. ಒಂದು ಮನೆಯಲ್ಲಿ ಟಿವಿ ಇದ್ದರೆ ಅವರು ಶ್ರೀಮಂತರು ಎಂದು ಭಾವಿಸುವ ದಿನಮಾನ ಅವು. ಕಪ್ಪು ಬಿಳುಪು ಹಾಗೂ ಕಲರ್ ಟಿವಿಗಳಲ್ಲಿ ರಾಮಾಯಣ ನೋಡಲು ಜನರು ಮುಗಿ ಬೀಳುತ್ತಿದ್ದರು. ಬರೀ ಕತೆ ನೋಡಲು ಅಲ್ಲ, ಅಲ್ಲಿಯ ಶ್ರೀರಾಮಚಂದ್ರ ಹಾಗೂ ಸೀತಾದೇವಿಯನ್ನು ಕಣ್ಣು ತುಂಬಿಕೊಂಡು ಕೈ ಮುಗಿಯುತ್ತಿದ್ದರು.
ಭಾನುವಾರ ಬೆಳಿಗ್ಗೆ ಹತ್ತು ಗಂಟಗೆ ದೇಶದ ಬೀದಿ ಬೀದಿಗಳು ಭಣಗುಡುತ್ತಿದ್ದವು. ಮುಂಜಾನೆದ್ದು ಹೆಂಗಸರು ಮನೆ ಮಂದಿಗೆಲ್ಲ ತಿಂಡಿ ವ್ಯವಸ್ಥೆ ಮಾಡಿ, ಒಂಬತ್ತೂವರೆಗೆ ಟಿವಿ ಮುಂದೆ ಹಾಜರಾಗುತ್ತಿದ್ದರು. ಕೆಲವರು ಟಿವಿ ಪರದೆಗೆ ಪೂಜೆ ಮಾಡುತ್ತಿದ್ದರು. ಹೂವಿನ ಹಾರ ಹಾಕಿ, ದೀಪ ಬೆಳಗಿ, ಆರತಿ ಎತ್ತಿ ಶ್ರೀರಾಮ ಹಾಗೂ ಸೀತಾದೇವಿಯನ್ನು ಬರಮಾಡಿಕೊಳ್ಳುತ್ತಿದ್ದರು. ಅದು ಆ ರಾಮಾಯಣಕ್ಕೆ ಇದ್ದ ಗತ್ತು ಹಾಗೂ ಗೌರವ. ರಾಮಾಯಣ ಪ್ರಸಾರ ಆಗುತ್ತಿದ್ದ ಹೊತ್ತಿಗೆ ವಿದ್ಯುತ್ ಕೂಡ ತೆಗೆಯುತ್ತಿರಲಿಲ್ಲ. ಅಕಸ್ಮಾತ್ ತೆಗೆದರೆ ಮುಗಿಯಿತು. ಕೆಲವು ಕಡೆ ವಿದ್ಯುತ್ ಸರಬರಾಜು ಕಚೇರಿಗೆ ಮುತ್ತಿಗೆ ಹಾಕಿ ಗಲಾಟೆ ಕೂಡ ನಡೆಯುತ್ತಿದ್ದವು. ರಾಮಾಯಣ ಅಷ್ಟೊಂದು ಮೋಡಿ ಮಾಡಿತ್ತು.
ರಮಾನಂದ್ ಸಾಗರ್ ಅದ್ಯಾವ ಗಳಿಗೆಯಲ್ಲಿ ರಾಮಾಯಣವನ್ನು ನಿರ್ದೇಶಿಸಲು ಮನಸು ಮಾಡಿದರೋ ಏನೊ? ಅವರು ಅಲ್ಲಿವರೆಗೆ ಮಾಡಿದ ಸಿನಿಮಾ ಕೆಲಸಗಳು ಮರೆತು ಹೋದವು. ರಾಮಾಯಣ ಮಾತ್ರ ಅವರಿಗೆ ಕೊನೇವರೆಗೂ ದೇಶವ್ಯಾಪಿ ಮೆರವಣಿಗೆ ಮಾಡಿದವು. ಅದಕ್ಕೆ ಕಾರಣ ಅವರು ಕತೆಯನ್ನು ಹೇಳಿದ ರೀತಿ ಮಾತ್ರ ಅಲ್ಲ, ಪ್ರತಿಯೊಂದು ಪಾತ್ರಕ್ಕೂ ಆಯ್ಕೆ ಮಾಡಿಕೊಂಡಿದ್ದ ಕಲಾವಿದರೂ ಕಾರಣ. ರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಕ್ಲಿಯಾ, ರಾವಣನಾಗಿ ಅರವಿಂದ್ ತ್ರಿವೇದಿ ಹಾಗೂ ಹನುಮಂತನಾಗಿ ಧಾರಾಸಿಂಗ್ ಜೀವ ತುಂಬಿದ್ದರು. ಪೌರಾಣಿಕ ಪಾತ್ರಗಳು ಹೀಗೆ ಇದ್ದಿರಬೇಕೆನ್ನುವಷ್ಟು ಭಕ್ತಿ ಮೂಡಿಸಿದ್ದವು.
ಮೂವತ್ತಾರು ವರ್ಷ. ಆಗ ಈಗಿನಷ್ಟು ತಂತ್ರಜ್ಞಾನ ಬೆಳೆದಿರಲಿಲ್ಲ. ಗ್ರೀನ್ ಮ್ಯಾಟ್, ವಿಎಫ್‌ಎಕ್ಸ್ ಇತ್ಯಾದಿ ಹೆಸರುಗಳೇ ಗೊತ್ತಿರಲಿಲ್ಲ. ಎಲ್ಲವನ್ನೂ ಕ್ಯಾಮೆರಾ ಟೆಕ್ನಿಕ್‌ನಿಂದ ಮಾಡಬೇಕಿತ್ತು. ಅಂಥ ಕ್ಯಾಮೆರಾಮನ್ ಕೂಡ ಇದ್ದರು. ರಾಮಾಯಣದಲ್ಲಿ ಎಂತೆಂಥ ಪವಾಡ ಸದೃಶ್ಯ ದೃಶ್ಯಗಳು ಬರುತ್ತವೆಂದು ಎಲ್ಲರಿಗೂ ಗೊತ್ತು. ಯುದ್ಧ, ಕಲ್ಲಿನಿಂದ ಸೇತುವೆ ಕಟ್ಟುವುದು, ಹನುಮಂತ ಬೆಟ್ಟವನ್ನು ಹೊತ್ತುಕೊಳ್ಳುವುದು, ಲಂಕಾ ದಹನ, ವಾನರ ಸೇನೆಯ ಕದನ ಪ್ರತಿಯೊಂದಕ್ಕೂ ಕ್ಯಾಮೆರಾ ಟೆಕ್ನಿಕ್‌ನಿಂದ ಮಾಡಿದ್ದರು ರಮಾನಂದ್ ಸಾಗರ್. ಈಗ ಈ ವೈಭವನ್ನು ಮತ್ತೆ ಕಣ್ತುಂಬಿಕೊಳ್ಳಬಹುದು.