ರಾಮನಗರ: ಬೆಂಗಳೂರಿನ ಕ್ರೈಸ್ಟ್ ಕಾಲೇಜು ವಿದ್ಯಾರ್ಥಿಗಳ ಅಪಹರಣಕ್ಕೆ ಯತ್ನಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ರಾಮನಗರದ ಐಜೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ವಿದ್ಯಾರ್ಥಿಗಳನ್ನ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು ರಾಮನಗರದ ಮಥೀನ್ (29) ಹಾಗೂ ಸುಹೇಲ್ (30) ಎಂದು ಗುರುತಿಸಲಾಗಿದೆ ಮತ್ತೊಬ್ಬ ಆರೋಪಿಯ ಹೆಸರು ತಿಳಿದು ಬಂದಿಲ್ಲ. ಈ ಇಬ್ಬರು ರಾಮನಗರದಲ್ಲಿ ರೇಡಿಯಂ ಸ್ಟಿಕ್ಕರ್ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದವರು. ಇದೇ ಮೊದಲ ಬಾರಿಗೆ ಹಣ ಮಾಡಕೊಳ್ಳಲು ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ ಅಪಹರಣ ಮಾಡಲು ಯತ್ನಿಸಿದ್ದರು.
ಬೆಂಗಳೂರಿನ ಪ್ರತಿಷ್ಟಿತ ಕ್ರೈಸ್ಟ್ ಕಾಲೇಜಿನಲ್ಲಿ ಬಿ.ಟೆಕ್ ಮಾಡುತ್ತಿದ್ದ ವಿದ್ಯಾರ್ಥಿಗಳು ಪ್ರಾಜೆಕ್ಟ್ ನಿಮಿತ್ತ ಮೈಸೂರಿಗೆ ತೆರಳಿದ್ದರು. ನಂತರ ವಾಪಸ್ ಬರುವ ವೇಳೆ ರಾಮನಗರದಲ್ಲಿ ಬೈಕ್ ನಿಲ್ಲಿಸಿ ಮೊಬೈಲ್‍ನಲ್ಲಿ ಮಾತನಾಡುವ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ರಾಮನಗರದಲ್ಲಿ ಬೈಕ್ ನಿಲ್ಲಿಸಿ ಮಾತನಾಡುತ್ತಿದ್ದ ವಿದ್ಯಾರ್ಥಿಗಳನ್ನು ಗಮನಿಸಿದ ಮೂವರು ಕಿಡಿಗೇಡಿಗಳ ತಂಡ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿದ್ದಾರೆ. ನೀನು ಮುಸ್ಲಿಂ ನಿನ್ನ ಜೊತೆ ಇರುವ ಗೆಳೆಯ ಬೇರೆ ಧರ್ಮದವನು, ನೀವು ಇಬ್ಬರು ಪ್ರೀತಿ ಮಾಡುತ್ತಿದ್ದೀರಾ. ಈ ವಿಚಾರವನ್ನು ಗುರು ಹಿರಿಯರಿಗೆ ತಿಳಿಸುತ್ತೇನೆ. ನೀನು ಬೈಕ್ ಹತ್ತಿ ಬಾ ನಮ್ಮ ಸಂಘದ ಕಚೇರಿಗೆ ಕರೆದುಕೊಂಡು ಹೋಗಿ ಅಲ್ಲಿ ತೀರ್ಮಾನ ಮಾಡೋಣ ಎಂದು ಬಲವಂತವಾಗಿ ವಿದ್ಯಾರ್ಥಿನಿಯನ್ನು ಕರೆದುಕೊಂಡು ಹೋಗಿದ್ದಾರೆ.
ಆದರೆ ರಾಮನಗರದ ಒಳಭಾಗ ತಲುಪಿದ ನಂತರ ಬೈಕ್‍ನ್ನು ಬೇರೆಡೆ ತಿರುಗಿಸಿ ಕೈಲಾಂಚ ಗ್ರಾಮದ ಎಟಿಎಂ ಬಳಿ ನಿಲ್ಲಿಸಿದ್ದಾರೆ. ನಂತರ ನಮಗೆ 5 ಸಾವಿರ ಹಣ ಕೊಡು ನಿಮ್ಮನ್ನ ಬಿಟ್ಟು ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ತಕ್ಷಣ ಆ ವಿದ್ಯಾರ್ಥಿನಿ ತನ್ನ ಸಹೋದರನಿಗೆ ವಿಷಯ ಮುಟ್ಟಿಸಿ ಹಣ ಹಾಕಲು ಹೇಳಿದ್ದಾರೆ. ಹಣ ಡ್ರಾ ಮಾಡುವ ನೆಪದಲ್ಲಿ ವಿದ್ಯಾರ್ಥಿನಿ ತನ್ನ ಅಣ್ಣನಿಗೆ ತಾನು ಇರುವ ಮೊಬೈಲ್ ಲೊಕೇಷನ್ ಹಾಗೂ ವಿಚಾರ ಹೇಳಿದ್ದಾರೆ. ವಿದ್ಯಾರ್ಥಿನಿ ಅಣ್ಣ ರಾಮನಗರ ಕಂಟ್ರೋಲ್ ರೂಂಗೆ ಮಾಹಿತಿ ಕೊಟ್ಟಿದ್ದು. ಕಂಟ್ರೋಲ್ ರೂಂಗೆ ಬಂದ ಮಾಹಿತಿ ಮೇರೆಗೆ ಪೊಲೀಸರು ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ.
ಈ ಪ್ರಕರಣದಲ್ಲಿ ಸಿಕ್ಕಿಬಿದ್ದು ತಪ್ಪಿಸಿಕೊಂಡಿದ್ದ ಆರೋಪಿಗಳು ಇದೀಗ ಪೊಲೀಸರ ಅಥಿತಿಯಾಗಿದ್ದಾರೆ. ಈ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.