ರಾಮನಗರ: ಬೀದಿ ನಾಯಿಗಳು ಮತ್ತೆ ದಾಳಿ ನಡೆಸಿದ್ದು, ಓರ್ವ ಬಾಲಕನ ತೊಡೆಗೆ ಕಚ್ಚಿ ಗಾಯಗೊಳಿಸಿರುವ ಘಟನೆ ನಗರದ ಐಜೂರು ಬಡಾವಣೆಯಲ್ಲಿ ನಡೆದಿದೆ.
ಐಜೂರು ಬಡಾವಣೆಯ ನಿವಾಸಿ ಪುಟ್ಟಸ್ವಾಮಿ ಅವರ ಪುತ್ರ ಅಂಜನ್ (11) ಶಾಲೆಯಿಂದ ಮನೆಗೆ ಬಂದು ಆಟವಾಡುತ್ತಿದ್ದ. ಈ ವೇಳೆ ಬೀದಿ ನಾಯಿಗಳು ಏಕಾಏಕಿ ಮೈಮೇಲೆ ಎರಗಿ ದಾಳಿ ನಡೆಸಿವೆ. ಅಲ್ಲದೇ ನಾಯಿಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಕೆಳಗೆ ಬಿದ್ದ ಅಂಜನ್‍ನ ಮೇಲೆ ದಾಳಿ ನಡೆಸಿ ಕಾಲನ್ನು ಕಚ್ಚಿ ಗಾಯಗೊಳಿಸಿವೆ. ಅದೃಷ್ಟವಶಾತ್ ಸಾರ್ವಜನಿಕರು ಬಾಲಕನ ಮೇಲೆ ನಾಯಿಗಳು ದಾಳಿ ಮಾಡಿದ್ದನ್ನು ಗಮನಿಸಿ ರಕ್ಷಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ.
Advertisement
Advertisement
ಘಟನೆಯಲ್ಲಿ ಗಾಯಗೊಂಡಿರುವ ಬಾಲಕ ಅಂಜನ್‍ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಳೆದ ಮೂರು ದಿನಗಳ ಹಿಂದೆ ನಗರದ 30ನೇ ವಾರ್ಡ್ ನಲ್ಲಿ 11 ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದವು. ಪರಿಣಾಮ ನಾಯಿಗಳಿಂದ ತಪ್ಪಿಸಿಕೊಳ್ಳು ಯತ್ನಿಸಿ ಬಿದ್ದಿದ್ದ ಬಾಲಕಿಯ ಕೈ ಮುರಿದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಬೀದಿ ನಾಯಿಗಳ ದಾಳಿ ನಡೆದಿದ್ದು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ.
Advertisement
ನಗರಸಭೆ ಅಧಿಕಾರಿಗಳಿಗೆ ಬೀದಿ ನಾಯಿಗಳ ದಾಳಿ ವಿಚಾರವಾಗಿ ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಘಟನೆಗೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ಅಧಿಕಾರಿಗಳ ನಿರ್ಲಕ್ಷದಿಂದ ಇದೀಗ ಮತ್ತೊಂದು ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.