ರಾಮನಗರ: ರಾಮನಗರದ ಎಸ್‍ಪಿ ಅನೂಪ್ ಶೆಟ್ಟಿ ವಿರುದ್ಧ ಕಳೆದ ನವೆಂಬರ್‌ನಲ್ಲಿ ಗರಂ ಆಗಿ ವಾರ್ನ್ ನೀಡಿದ್ದ ಸಂಸದ ಡಿ.ಕೆ.ಸುರೇಶ್ ಇಂದು ಕೂಡ ಗರಂ ಆಗಿದ್ದಲ್ಲದೇ, ಸಭೆಗೆ ಬರುವಂತೆ ಹೇಳಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ಪ್ರಸಂಗ ರಾಮನಗರದ ಜಿಲ್ಲಾ ಪಂಚಾಯತ್‍ನಲ್ಲಿ ನಡೆಯಿತು.
ಒಂದೆಡೆ ಎಸ್‍ಪಿ ವಿರುದ್ಧ ಸಂಸದ ಸುರೇಶ್ ಗರಂ ಆಗಿದ್ದರೆ, ಅದೇ ಸಭೆಯಲ್ಲಿ ಜೆಡಿಎಸ್ ಶಾಸಕ ಎ.ಮಂಜುನಾಥ್ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ವಿರುದ್ಧ ಕಿಡಿಕಾರಿದರು. ಅಷ್ಟೇ ಅಲ್ಲದೆ ದಿಶಾ ಸಭೆಯಲ್ಲಿಯೇ ನೇರಾನೇರವಾಗಿ ಮಾತಿನ ಚಕಮಕಿ ಸಹ ನಡೆಯಿತು. ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಕರೆದಿದ್ದ ಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವಿನ ಕಾದಾಟಕ್ಕೆ ದಿಶಾ ಸಭೆ ವೇದಿಕೆಯಾಗಿತ್ತು.
Advertisement
Advertisement
ಜಿಲ್ಲಾಡಳಿತದಿಂದ ಜನಪ್ರತಿನಿಧಿಗಳನ್ನ ನಿರ್ಲಕ್ಷ್ಯ ಮಾಡಲಾಗುತ್ತಿದೆ. ತಮ್ಮ ಕ್ಷೇತ್ರದಲ್ಲಿ ನಡೆಯುವ ಕೆಲಸಗಳನ್ನು ಸಹ ತಮ್ಮ ಗಮನಕ್ಕೆ ತರದೇ ಮಾಡಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ತಮ್ಮ ಅನುದಾನದಲ್ಲಿ ಕೆಲಸ ಮಾಡುತ್ತಿರುವುದಲ್ಲ ಅದರ ಬಗ್ಗೆ ಮಾಹಿತಿ ನೀಡಬೇಕೆಂದಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ಎ.ಮಂಜುನಾಥ್ ಅಸಮಧಾನ ವ್ಯಕ್ತಪಡಿಸಿದರು.
Advertisement
ಶಾಸಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು, ನಾನು ಹೇಳಿರುವುದನ್ನು ತಿರುಚಿ ಹೇಳುವುದಲ್ಲ. ಗದರಿ ಮಾತನಾಡಬೇಡಿ ಎಲ್ಲವನ್ನೂ ತಮ್ಮ ಗಮನಕ್ಕೆ ತಂದು ಕೆಲಸ ಮಾಡಬೇಕೆಂದೇನಿಲ್ಲ ಎಂದು ಪ್ರತ್ಯುತ್ತರ ನೀಡಿದರು. ಇಬ್ಬರ ಮಾತಿನ ಚಕಮಕಿ ನೋಡಿ ಸಂಸದ ಸುರೇಶ್ ಕೂಡ ಕೆಲಕಾಲ ತಬ್ಬಿಬ್ಬಾದರು.
Advertisement
ಸಭೆಗೆ ಹಾಜರಾಗಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ಸಂಸದ ಡಿ.ಕೆ.ಸುರೇಶ್ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲು ತಡಬಡಾಯಿಸಿದರು. ಅಧಿಕಾರಿಗಳಿಗೆ ಸಭೆಯಲ್ಲಿಯೇ ಚಳಿ ಬಿಡಿಸುವ ಮೂಲಕ ಸಂಸದ ಖಡಕ್ ಕ್ಲಾಸ್ ತೆಗೆದುಕೊಂಡರು.
2019ರ ನವೆಂಬರ್‌ನಲ್ಲಿ ನಡೆದ ದಿಶಾ ಸಭೆಗೆ ಗೈರಾಗಿದ್ದ ರಾಮನಗರ ಎಸ್‍ಪಿ ಅನೂಪ್ ಎ ಶೆಟ್ಟಿ ಇಂದು ಕೂಡ ಗೈರಾಗಿದ್ದರು. ಹೀಗಾಗಿ ಎಸ್‍ಪಿ ಅನೂಪ್ ಶೆಟ್ಟಿ ವಿರುದ್ಧ ಗರಂ ಆದ ಡಿ.ಕೆ.ಸುರೇಶ್ ಅವರು, ಜಿಲ್ಲೆಯಲ್ಲಿ ಕ್ರೈಂ ರೇಟ್ ಜಾಸ್ತಿ ಇದೆ ಅಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಹೋಟೆಲ್, ಅಂಗಡಿಗಳನ್ನು ರಾತ್ರಿ 11 ಗಂಟೆ ನಂತರ ಬಂದ್ ಮಾಡಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವಂತೆ ಎಸ್‍ಪಿಯನ್ನ ಸಭೆಗೆ ಕರೆಸಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಸ್ವತಃ ಜಿಲ್ಲಾಧಿಕಾರಿಯೇ ಎಸ್‍ಪಿಗೆ ಕರೆ ಮಾಡಿ ಬರುವಂತೆ ಮನವಿ ಮಾಡಿದರೂ ಎಸ್‍ಪಿ ಅನೂಪ್ ಶೆಟ್ಟಿ ಮಾತ್ರ ಸಭೆಗೆ ಬರಲೇ ಇಲ್ಲ.
ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಲು ಕರೆಯಲಾಗಿದ್ದ ದಿಶಾ ಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವಿನ ಮಾತಿನ ಸಮರಕ್ಕೂ ವೇದಿಕೆಯಾಯಿತು. ಜಿಲ್ಲೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವಿನ ಸಮನ್ವಯತೆ ಇಲ್ಲ ಎಂಬುದು ಎದ್ದು ಕಾಣುತ್ತಿತ್ತು.