ಮತ್ತೆ ಹಳೇ ಪದ್ಧತಿಗೆ ಮರಳಿದ ರೇಷ್ಮೆ ಮಾರುಕಟ್ಟೆ – ರೈತರ ಗೋಳು ಕೇಳೋರು ಯಾರು?

Public TV
2 Min Read
RMG SILK MARKET

ರಾಮನಗರ: ಆರ್.ಟಿ.ಜಿ.ಎಸ್ (ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ) ಮೂಲಕ ರೈತರ ಖಾತೆಗೆ ನೇರವಾಗಿ ಹಣ ಪಾವತಿಸುವ ರಾಜ್ಯದ ಮೊದಲ ಮಾರುಕಟ್ಟೆ ಎಂಬ ಖ್ಯಾತಿಗಳಿಸಿದ್ದ ರಾಮನಗರದ ರೇಷ್ಮೆ ಮಾರುಕಟ್ಟೆ ಇದೀಗ ಆರ್.ಟಿ.ಜಿ.ಎಸ್ ಸ್ಥಗಿತಗೊಳಿಸುವ ಮೂಲಕ ಹಳೆ ಪದ್ಧತಿ ನೇರವಾಗಿ ಹಣವನ್ನ ರೈತರ ಕೈಗೆ ನೀಡುವ ವ್ಯವಸ್ಥೆಗೆ ಜಾರುವ ಮೂಲಕ ರೇಷ್ಮೆ ರೈತರನ್ನ ಸಂಕಷ್ಟಕ್ಕೆ ದೂಡಿದೆ. ಅದು ಕೂಡಾ ಮಾರುಕಟ್ಟೆಯ ಉಪನಿರ್ದೆಶಕ ಆಸ್ಪತ್ರೆಗೆ ದಾಖಲಾಗಿದ್ದಕ್ಕೆ ಇದೀಗ ಹಳೇ ಪದ್ಧತಿಯನ್ನು ಮತ್ತೆ ಆರಂಭಿಸಲಾಗಿದೆ.

ಏಷ್ಯಾದ ಅತೀ ದೊಡ್ಡ ರೇಷ್ಮೆ ಮಾರುಕಟ್ಟೆ ಎಂಬ ಖ್ಯಾತಿಯನ್ನ ಗಳಿಸಿರುವ ರಾಮನಗರದ ಮಾರುಕಟ್ಟೆ ಇದೀಗ ಪುನಃ ಹಳೆಯ ಕೆಲಸಕ್ಕೆ ಕೈ ಹಾಕಿದ್ದು, ರೇಷ್ಮೆಗೂಡು ಮಾರಾಟ ಮಾಡಿದ ರೈತರಿಗೆ ನೇರವಾಗಿ ಹಣವನ್ನ ನೀಡುವಂತಹ ಕೆಲಸವನ್ನ ಮಾಡ್ತಿದೆ. ಆರ್.ಟಿ.ಜಿ.ಎಸ್ ಸ್ಥಗಿತವಾಗಿರೋದ್ರಿಂದ ರೈತರಿಗೆ ಸಾಕಷ್ಟು ಅನಾನುಕೂಲಗಳು ಎದುರಾಗಿವೆ. ಅದರಲ್ಲೂ ಆರ್.ಟಿ.ಜಿ.ಎಸ್ ಅಳವಡಿಸಿಕೊಂಡಿದ್ದ ವೇಳೆ ಡೀಲರ್ಸ್‍ಗಳು ಹಣವನ್ನು ಮಾರುಕಟ್ಟೆಯಲ್ಲಿ ಕಟ್ಟಿ ನಂತರ ಗೂಡು ಖರೀದಿ ಮಾಡುತ್ತಿದ್ದರು. ಆದ್ರೆ ಇದೀಗ ಸರಿಯಾದ ಸಮಯಕ್ಕೆ ಮಾರುಕಟ್ಟೆಗೆ ಹಣವನ್ನು ಸಹ ಕಟ್ಟುತ್ತಿಲ್ಲ. ಅಲ್ಲದೇ ರೈತರ ರೇಷ್ಮೆಗೂಡನ್ನು ಬಿಡ್ ಮಾಡಿ ನಂತರ ತೂಕವನ್ನೂ ಮಾಡದೇ ದಿನನಿತ್ಯ ರೈತರನ್ನ ಕಾಯಿಸ್ತಿದ್ದಾರೆ. ಗೂಡು ಮಾರಾಟವಾದ ನಂತರವೂ ಹಣವಿಲ್ಲದೇ ರೈತರು ಮಾರುಕಟ್ಟೆಯಲ್ಲಿಯೇ ಅಲೆದಾಡುವಂತಾಗಿದೆ.

RMG SILK MARKET 2

ರೇಷ್ಮೆ ಮಾರುಕಟ್ಟೆಯ ಉಪನಿರ್ದೇಶಕರಾದ ಮುನ್ಷಿ ಬಸಯ್ಯ ಕಳೆದ 15 ದಿನಗಳ ಹಿಂದೆ ರಾಮನಗರದಲ್ಲಿ ಕಚೇರಿ ಕಾರ್ಯ ಮುಗಿಸಿ ಬೆಂಗಳೂರಿನಲ್ಲಿನ ಮನೆಗೆ ತರಳುವ ವೇಳೆ ಅಪಘಾತ ಸಂಭವಿಸಿದೆ. ಬಸ್‍ನಿಂದ ಇಳಿದು ರಸ್ತೆ ದಾಟುವ ವೇಳೆ ಮತ್ತೊಂದು ಬಸ್ ಡಿಕ್ಕಿ ಹೊಡೆದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಆಸ್ಪತ್ರೆಗೆ ದಾಖಲಾದ ದಿನದಿಂದ ಇಲ್ಲಿಂದಿನ ತನಕ ಆನ್‍ಲೈನ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಉಪನಿರ್ದೇಶಕರು ತಮ್ಮ ಆರೋಗ್ಯ ಸುಧಾರಣೆಯಾಗುವ ತನಕ ರೈತರು ಮಾತ್ರ ಹಣಕ್ಕಾಗಿ ಮಾರುಕಟ್ಟೆಯನ್ನು ಸುತ್ತುವುದೇ ಕಾಯಕವಾಗಲಿದೆ.

ಮಾರುಕಟ್ಟೆಯ ಉಪನಿರ್ದೇಶಕ ಮುನ್ಷಿ ಬಸಯ್ಯ ಹೊರತು ಪಡಿಸಿದ್ರೆ ಯಾವೊಬ್ಬ ಅಧಿಕಾರಿಗೂ, ಮಾರುಕಟ್ಟೆಯ ಉಸ್ತುವಾರಿ ನೋಡಿಕೊಳ್ತಿರುವ ವಿಶೇಷ ಅಧಿಕಾರಿಗೂ ಸಹ ಆರ್.ಟಿ.ಜಿ.ಎಸ್ ಮೂಲಕ ರೈತರಿಗೆ ಹಣ ಪಾವತಿಸುವುದು ತಿಳಿದಿಲ್ಲ. ಹಾಗಾಗಿ ರೈತರಿಗೆ ಆರ್.ಟಿ.ಜಿ.ಎಸ್ ಮೂಲಕ ಹಣವನ್ನ ನೀಡುವಂತಹ ವ್ಯವಸ್ಥೆಗೆ ಬ್ರೇಕ್ ಹಾಕಲಾಗಿದೆ. ದಿನನಿತ್ಯ ಮಾರುಕಟ್ಟೆಯಲ್ಲಿ 40 ಟನ್‍ನಷ್ಟು ರೇಷ್ಮೆಗೂಡಿನ ವಹಿವಾಟು ನಡೆಯುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಿಂದ ಅಲ್ಲದೇ ಹೊರ ರಾಜ್ಯಗಳಿಂದಲೂ ಸಹ ರೈತರು ಮಾರುಕಟ್ಟೆಗೆ ಗೂಡನ್ನು ದಿನನಿತ್ಯ ತಂದು ಮಾರಾಟ ಮಾಡ್ತಿದ್ದು, ಇತ್ತ ಆರ್.ಟಿ.ಜಿ.ಎಸ್ ಇಲ್ಲದೇ, ಅತ್ತ ಸರಿಯಾದ ಸಮಯಕ್ಕೆ ನೇರವಾಗಿ ಹಣ ಕೂಡಾ ಸಿಗದೇ ಪರದಾಡುವಂತಾಗಿದೆ.

RMG SILK MARKET3

ಬೆಳೆದ ರೇಷ್ಮೆ ಬೆಳೆಗೆ ಬೆಲೆ ಕುಸಿತವಾಗ್ತಿದ್ದು ರೈತರು ಒಂದೆಡೆ ರೇಷ್ಮೆ ಸಹವಾಸ ಬೇಡ ಎಂಬಂತಾಗಿದ್ದಾರೆ. ಅದ್ರೆ ಇದೀಗ ಉತ್ತಮ ಬೆಲೆ ಇದ್ದು ಬೆಳೆದ ಬೆಳೆ ಮಾರಾಟ ಮಾಡಿದ್ರು ಸರಿಯಾಗಿ ಹಣ ಮಾತ್ರ ರೈತರ ಕೈಗೆ ಸಿಕ್ತಿಲ್ಲ. ಹೀಗಾಗಿ ಡಿಡಿ ಒಬ್ಬರಿಗೆ ಆರ್.ಟಿ.ಜಿ.ಎಸ್ ಗೊತ್ತಿದ್ರೆ ಸಾಲದು ಬೇರೆ ಅಧಿಕಾರಿಗಳಿಗೂ ಅದರ ಮಾಹಿತಿ ಇರಬೇಕು ಈ ಬಗ್ಗೆ ರೇಷ್ಮೆ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *