– ಕೊರೊನಾ ಭೀತಿ ನಡುವೆ ವಹಿವಾಟು
ರಾಮನಗರ: ಕೊರೊನಾ ಪ್ರಕರಣಗಳು ಪತ್ತೆಯಾಗದೆ ನೆಮ್ಮದಿಯಾಗಿದ್ದ ರೇಷ್ಮೆನಗರಿಗೆ ಮುಂದಿನ ದಿನಗಳಲ್ಲಿ ರೇಷ್ಮೆ ಮಾರುಕಟ್ಟೆಯೇ ಕಂಟಕವಾಗಲಿದೆಯೇ ಎಂಬ ಆತಂಕ ಜಿಲ್ಲಾಡಳಿತಕ್ಕೆ ಇದೀಗ ಎದುರಾಗಿದೆ. ಸರ್ಕಾರದ ಆದೇಶದಂತೆ ಇಂದಿನಿಂದ ಏಷ್ಯಾದ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆಯನ್ನು ತೆರೆಯಲಾಗುತ್ತಿದೆ.
ಸಾವಿರಾರು ಜನರು ಒಟ್ಟಿಗೆ ಸೇರುವ ಮಾರುಕಟ್ಟೆಯಲ್ಲಿ ಸಮಾಜಿಕ ಅಂತರ ಕಾಯ್ದುಕೊಳ್ಳುವುದು ಹೇಗೆ ಎಂಬ ಚಿಂತೆ ಜಿಲ್ಲಾಡಳಿತಕ್ಕೆ ಕಾಡುತ್ತಿದೆ. ಇತ್ತ ಮಾರುಕಟ್ಟೆ ಸ್ಥಗಿತಗೊಂಡಿದ್ದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದರು. ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.
Advertisement
Advertisement
ಏಷ್ಯಾದಲ್ಲೇ ಅತೀ ಹೆಚ್ಚು ವಹಿವಾಟು ನಡೆಸುವ ರಾಮನಗರದ ರೇಷ್ಮೆ ಮಾರುಕಟ್ಟೆಯ ಒಂದು ದಿನದ ಆದಾಯ ಸರಾಸರಿ 2 ಕೋಟಿ ರೂ.ಗಳಷ್ಟಿದೆ. ಆದರೆ ಇಲ್ಲಿ ರೈತರು, ಮಾರುಕಟ್ಟೆ ಅಧಿಕಾರಿಗಳು, ಡೀಲರ್ಸ್ ಸೇರಿ ಕನಿಷ್ಟ ಮೂರು ಸಾವಿರ ಮಂದಿ ಏಕಕಾಲದಲ್ಲಿ ಜಮಾವಣೆ ಆಗುತ್ತಾರೆ. ಗೂಡಿನಂತಿರುವ ಈ ಮಾರುಕಟ್ಟೆಯಲ್ಲಿ ಉಸಿರಾಟಕ್ಕೂ ಕಷ್ಟವಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
Advertisement
ರೇಷ್ಮೆ ಮಾರುಕಟ್ಟೆ ತೆರೆದರೆ, ಮಾರುಕಟ್ಟೆಗೆ ಬರುವ ವಾಹನಗಳಿಗೆ ಮುಕ್ತ ಪ್ರವೇಶ ನೀಡಬೇಕಾಗುತ್ತದೆ. ದೂರದ ಜಿಲ್ಲೆಗಳಿಂದ ಬರುವವರು ಸಹ ಇದೇ ಕಾರಣ ಕೊಟ್ಟು ಗಡಿ ದಾಟಬಹುದು. ಮಾತ್ರವಲ್ಲದೆ ಚಾಲಕರಿಗೆ, ಬೆಳೆಗಾರರಿಗೆ ಊಟ, ವಿಶ್ರಾಂತಿ, ಟೀ-ಕಾಫಿ ಎಲ್ಲ ವ್ಯವಸ್ಥೆಗಳಿಗಾಗಿ ಹೋಟಲ್‍ಗಳನ್ನು ಸಹ ತೆರೆಯಬೇಕಾಗುತ್ತದೆ. ಬೇಕರಿಗಳು ಸಹ ಜಿಲ್ಲಾಡಳಿತದ ದುಂಬಾಲು ಬೀಳುವುದು ಸರ್ವೇ ಸಾಮಾನ್ಯವಾಗುತ್ತದೆ.
Advertisement
ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ನಗದು ಕೊರತೆ ನೆಪದಿಂದಾಗಿ ಚೆಕ್ ವ್ಯವಹಾರ ಮತ್ತೆ ಶುರುವಾದರೂ ಅಚ್ಚರಿ ಪಡಬೇಕಿಲ್ಲ. ಸುರಕ್ಷತೆ, ಸ್ವಚ್ಛತೆ, ಮುಂಜಾಗೃತಾ ಕ್ರಮವಾಗಿ ಹ್ಯಾಂಡ್ ವಾಶ್, ಸ್ಯಾನಿಟೈಸರ್, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಿಲ್ಲಾಡಳಿತ ಸೂಚಿಸಿದೆ. ಅಲ್ಲದೆ ಥರ್ಮಲ್ ಸ್ಕ್ಯಾನರ್ ನೀಡುವಂತೆ ಸರ್ಕಾರಕ್ಕೆ ಬೇಡಿಕೆಯಿಟ್ಟಿದ್ದು, ಥರ್ಮಲ್ ಸ್ಕ್ಯಾನರ್ ಬಂದ ಬಳಿಕ ರೈತರು, ಅಧಿಕಾರಿಗಳನ್ನೆಲ್ಲ ತಪಾಸಣೆ ನಡೆಸಿ ಒಳಗೆ ಬಿಡಲು ಜಿಲ್ಲಾಡಳಿತ ತೀರ್ಮಾನಿಸಿದೆ.