ರಾಮನಗರ: ರಾಜ್ಯದಲ್ಲಿ ರೇಷ್ಮೆ ಬೆಲೆ ಕುಸಿತಕ್ಕೆ ಕೇಂದ್ರ ಸರ್ಕಾರದ ಆಮದು ಕಾರಣ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಆರೋಪ ಮಾಡಿದ್ದಾರೆ.
ಇಂದು ಚನ್ನಪಟ್ಟಣ ತಾಲೂಕಿನ ಕಣ್ವಾ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಿದೇಶಗಳಿಂದ ರೇಷ್ಮೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಕಾರಣದಿಂದ ರಾಜ್ಯದಲ್ಲಿ ರೇಷ್ಮೆ ಬೆಲೆ ಕಡಿಮೆಯಾಗಿದೆ ಎಂದು ಆರೋಪ ಮಾಡಿದ್ದಾರೆ.
ರೇಷ್ಮೆ ಬೆಲೆ ಹೆಚ್ಚಿಸಲು ರೇಷ್ಮೆಯ ಹದಿನೈದು ಉಪ ಉತ್ಪನ್ನಗಳ ತಯಾರಿಗೆ ಸಿದ್ಧತೆ ನಡೆಸಲಾಗುತ್ತಿದೆ. ಮುಂದಿನ ವಾರದಲ್ಲಿ ಈ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. ರೇಷ್ಮೆ ಆಯೋಗದ ಕಾರ್ಯದರ್ಶಿಯೊಂದಿಗೆ ಸಂಜೆ ಸಭೆ ನಡೆಸಲಾಗುತ್ತಿದ್ದು, ರೇಷ್ಮೆ ದರ ಸಂಬಂಧ ಚರ್ಚೆ ಮಾಡಲಾಗುವುದು. ಅನ್‍ಲೈನ್ ಮೂಲಕ ರೈತರಿಗೆ ಪೇಮೆಂಟ್ ವ್ಯವಸ್ಥೆ ಮಾಡಲಾಗಿದೆ. ರೇಷ್ಮೆ ಹರಾಜು ಮುನ್ನ ಅಕೌಂಟ್‍ಗಳಲ್ಲಿ ಹಣ ಇಡುವ ವ್ಯವಸ್ಥೆ ಮಾಡಲಾಗುವುದು. ರೇಷ್ಮೆ ಮಾರುಕಟ್ಟೆಯನ್ನು ಅಧುನೀಕರಣ ಮಾಡಲಾಗುವುದು ಎಂದು ರೇಷ್ಮೆ ಬೆಳೆಗಾರರಿಗೆ ತಿಳಿಸಿದ್ದಾರೆ.
ಇದೇ ವೇಳೆ ಕಣ್ವದ ಬಳಿ 5 ಎಕರೆ ಪ್ರದೇಶವನ್ನು ಪ್ರವಾಸೋದ್ಯಮಕ್ಕೆ ಮೀಸಲಿಡಲಾಗಿದೆ. ಈ ಯೋಜನೆಗೆ 10 ಕೋಟಿ ಪ್ರಸ್ತಾವನೆಯಲ್ಲಿ 8 ಕೋಟಿ ಬಿಡುಗಡೆ ಮಾಡಲಾಗುವುದು. ಕಣ್ವ ಬಳಿ ಮಕ್ಕಳ ಪಾರ್ಕ್‍ಗೆ 2 ಕೋಟಿ ಬಿಡುಗಡೆ ಮಾಡಲಾಗಿದ್ದು, ಆದರೆ ಈ ಹಣ ಸಾಲುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಚನ್ನಪಟ್ಟಣದ ಕೆಎಸ್‍ಐಸಿ ಹಳೆ ಕಟ್ಟಡಗಳ ನವೀಕರಣ ಜೊತೆಗೆ ಒಂದು ಲಕ್ಷ ಸೀರೆ ತಯಾರಿಕೆಗೆ ಆದ್ಯತೆ ನೀಡಲಾಗುವುದು. ಮೈಸೂರಿನಲ್ಲಿಯು ಹೊಸ ಕಟ್ಟಡಗಳನ್ನು ಸಿದ್ಧಪಡಿಸಲಾಗುವುದು. ಈ ಯೋಜನೆಗಾಗಿ 100 ಕೋಟಿ ಮೀಸಲಿಡಲಾಗುವುದು ಎಂದು ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.