ರಾಮನಗರ: ಕನಕಪುರಕ್ಕೂ ಕಾಳಿಗೂ ಏನ್ ಸಂಬಂಧ ಅಂತೀರಾ, ನಾನು ಕನಕಪುರದ ಮೊಮ್ಮಗ. ಮಾಜಿ ಮಂತ್ರಿಗಳೇ ನಾನು ಕನಕಪುರದ ಕೆಂಪೇಗೌಡರ ಮಗ ಅಂತೀರಲ್ಲ, ಹಾಗೇ ಕಾಳೇಗೌಡರ ಮೊಮ್ಮಗ ನಾನು. ಹೆದರಿಸಬೇಡಿ ಇಲ್ಲಿ ಹೆದರಿಕೊಳ್ಳುವವರು ಯಾರೂ ಇಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ರಾಮನಗರದಲ್ಲಿ ಕಾಳಿಮಠದ ರಿಷಿ ಕುಮಾರ ಸ್ವಾಮೀಜಿ ಟಾಂಗ್ ನೀಡಿದ್ದಾರೆ.
ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಏಸು ಪ್ರತಿಮೆ ವಿರೋಧಿಸಿದ್ದಾರೆ. ಹಾಗೆಯೇ ಪ್ರತಿಮೆಗಾಗಿ ಕೆತ್ತನೆಯಾಗುತ್ತಿರುವ ಕಪಾಲ ಬೆಟ್ಟದ ಮೇಲಿರುವ ಕಲ್ಲುಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರ ಜೊತೆ ಅವರು ರಾಮನಗರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
Advertisement
Advertisement
ಇದೇ ವೇಳೆ ಮಾತನಾಡಿದ ಸ್ವಾಮೀಜಿ, ಕನಕಪುರ ನಿಮ್ಮದಲ್ಲ, ರಾಮನಗರ ನಿಮ್ಮದಲ್ಲ, ಕರ್ನಾಟಕ ನಿಮ್ಮದಲ್ಲ. ನಮ್ಮದೂ ರಾಮನಗರನೇ, ನಾವು ಕೂಡ ಕರ್ನಾಟಕದವರೇ. ತಪ್ಪು ನಮ್ಮಿಂದ ಆಗಿಲ್ಲ. ಇಂತಹ ಎಷ್ಟೋ ಬೆಟ್ಟಗಳನ್ನು ಹೊಡೆದಿರುವಂತವರೆಲ್ಲ ಬೆಟ್ಟದ ಮೇಲೆ ಇನ್ನೊಂದು ಇಡುವುದಕ್ಕೆ ಹೋಗ್ತಾ ಇದ್ದೀರಾ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ಡಿಕೆ ಶಿವಕುಮಾರ್‍ರವರು ಬೆಟ್ಟವನ್ನೇ ಕರಗಿಸಿ ಗಣಿಗಾರಿಕೆ ನಡೆಸಿದ್ದಾರೆ. ಇದೀಗ ಮತ್ತೊಂದು ಬೆಟ್ಟದ ಮೇಲೆ ಏಸುವಿನ ಪ್ರತಿಮೆ ಕೂರಿಸಲು ಹೋಗ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
ಕಳೆದ ಡಿಸೆಂಬರ್ 31 ರಂದು ಕಪಾಲ ಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಅಪಪ್ರಚಾರ ಹಾಗೂ ದೂರುಗಳನ್ನು ನೀಡುವ ಮೂಲಕ ಹೆದರಿಸಲು ಪ್ರಯತ್ನಿಸ್ತಿದ್ದೀರಿ. ಸೋಷಿಯಲ್ ಮೀಡಿಯಾಗಳಲ್ಲಿ ಮೋದಿ ವಿರುದ್ಧ ಯಡಿಯೂರಪ್ಪ ವಿರುದ್ಧ ಮಾತನಾಡಿದ್ದಾರೆ ಎಂದು ಅಪಪ್ರಚಾರ ಮಾಡ್ತಿದ್ದೀರಿ. ಆದರೆ ರಿಷಿಕುಮಾರ ಸ್ವಾಮೀಜಿ ಮೊದಲಿನಂತಿಲ್ಲ ಹೆದರಿಸಬೇಡಿ, ಹೆದರುವವರು ಯಾರೂ ಇಲ್ಲ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ಕಪಾಲ ಬೆಟ್ಟದಲ್ಲಿ ಅಕ್ರಮವಾಗಿ ಈಗಾಗಲೇ ರಸ್ತೆ, ವಿದ್ಯುತ್, ಕೊಳವೆ ಬಾವಿ ಸಂಪರ್ಕ ನೀಡಲಾಗಿದೆ. ಸದ್ಯಕ್ಕೆ ಕಪಾಲ ಬೆಟ್ಟದ ಮೇಲೆ ನಡೆಯುತ್ತಿರುವ ಕಲ್ಲು ಕೆತ್ತನೆಯ ಕಾರ್ಯದ ಕಲ್ಲುಗಳನ್ನು ಹಾಗೂ ಬೆಟ್ಟದ ಮೇಲಿರಿಸಿರುವ ಕಲ್ಲು ಕೊರೆಯುವ ಮಷಿನ್‍ಗಳನ್ನು 19 ನೇ ತಾರೀಕಿನ ಒಳಗಾಗಿ ತೆರವುಗೊಳಿಸಬೇಕು. ಇಲ್ಲದಿದ್ರೆ ರಾಮನಗರ ತಾಲೂಕಿನ ಬಿಡದಿ ಸಮೀಪವಿರುವ ಕೋತಿ ಆಂಜನೇಯ ದೇವಾಲಯದಿಂದ ಕಪಾಲ ಬೆಟ್ಟಕ್ಕೆ ಪಾದಯಾತ್ರೆ ನಡೆಸುತ್ತೇವೆ. ಪಾದಯಾತ್ರೆಯಲ್ಲಿ ಅನೇಕ ಸಾಧು-ಸಂತರು, ಉತ್ತರ ಕರ್ನಾಟಕದ ಸಾಧು-ಸಂತರು ಅನೇಕ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಭಾಗವಹಿಸ್ತಾರೆ. ಆ ದಿನ ಏನಾದ್ರೂ ಕಪಾಲ ಬೆಟ್ಟದಲ್ಲಿ ಹೆಚ್ಚು ಕಡಿಮೆಯಾದ್ರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.