– ನಾಲ್ವರು ಆರೋಪಿಗಳು ಅಂದರ್
ರಾಮನಗರ: ಮಗಳನ್ನ ಪ್ರೀತಿಸಿದ್ದಕ್ಕೆ ಯುವಕನ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಮೂಲಕ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಾನಗಲ್ ನಿವಾಸಿ ರವಿ (27) ಕೊಲೆಯಾದ ಯುವಕ. ರವಿ ಗೆಳತಿಯ ತಂದೆ ನಾಗೇಶ್, ಅಣ್ಣಂದಿರಾದ ಲೋಕೇಶ್, ಉದಯ್, ರವಿಕುಮಾರ್ ಬಂಧಿತ ಆರೋಪಿಗಳು. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ರಸ್ತೆಯ ಆನೆಹಳ್ಳ ಬಳಿ ರವಿಯನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು.
ಕೊಲೆಯಾದ ರವಿ ಸಣ್ಣ ಮಟ್ಟದ ಕಾಮಗಾರಿಗಳ ಗುತ್ತಿಗೆದಾರನಾಗಿದ್ದ. ರವಿ ತನ್ನ ಸಂಬಂಧಿ ಯುವತಿಯನ್ನು ಪ್ರೀತಿಸುತ್ತಿದ್ದ. ಇವರಿಬ್ಬರ ಪ್ರೀತಿಗೆ ಯುವತಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಕುಟುಂಬಸ್ಥರ ವಿರೋಧದ ನಡುವೆಯೂ ಇಬ್ಬರು ತಮ್ಮ ಪ್ರೀತಿಯನ್ನು ಮುಂದುವರಿಸಿದ್ದರು. ಈ ವಿಚಾರವಾಗಿ ಕೋಪಗೊಂಡ ಯುವತಿಯ ಸಂಬಂಧಿಕರು ಭಾನುವಾರ ರಾತ್ರಿ ಮಾತುಕತೆಗೆ ಅಂತ ರವಿಯನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದರು. ಗುಡೇಮಾರನಹಳ್ಳಿ ರಸ್ತೆಯಲ್ಲಿ ಸೋಮವಾರ ಯುವಕನ ಶವ ಸಾರ್ವಜನಿಕರ ಕಣ್ಣಿಗೆ ಬಿದಿತ್ತು. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆರೋಪಿಗಳು ಕೊಲೆ ಮಾಡುವುದಕ್ಕೂ ಮುನ್ನ ರವಿಯನ್ನು ಮಾಗಡಿ ಪುರಸಭೆ ಮುಂಭಾಗದಲ್ಲಿ ಹಲ್ಲೆ ಮಾಡಿದ್ದರು. ಹಾಕಿ ಸ್ಟಿಕ್ ಹಾಗೂ ಬ್ಯಾಟ್‍ನಿಂದ ಮನಬಂದಂತೆ ಥಳಿಸಿದ್ದರು. ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ದೂರದಿಂದ ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಪೊಲೀಸರ ಕೈ ಸೇರಿದೆ.
ಸೂಕ್ತ ಸಾಕ್ಷಿ ಪಡೆದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.