ರಾಮನಗರ: ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಹೆದ್ದಾರಿಯಲ್ಲಿ ಹಮ್ಸ್ ನಿರ್ಮಾಣ ಕಾರ್ಯ ನಡೆಯುತ್ತಿದ್ದಾಗ ಬೈಕ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ರಾಮನಗರ ಹೊರವಲಯದ ಜಿಲ್ಲಾಧಿಕಾರಿ ವಸತಿಗೃಹದ ಬಳಿಯೇ ನಡೆದಿದೆ.
ಜಿಲ್ಲಾಧಿಕಾರಿ ಕ್ಯಾಪ್ಟನ್.ಕೆ. ರಾಜೇಂದ್ರರವರ ಸರ್ಕಾರಿ ವಸತಿಗೃಹದ ಮುಂಭಾಗದಲ್ಲಿರುವ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ಹಮ್ಸ್ ನಿರ್ಮಿಸಲಾಗುತ್ತಿತ್ತು. ಈ ವೇಳೆ ಸಂಚಾರಿ ಪೊಲೀಸರಿಲ್ಲದೆ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರರೇ ಹೆದ್ದಾರಿಯ ಎರಡು ಬದಿಯಲ್ಲಿ ಸಾಗುವ ವಾಹನಗಳನ್ನು ಒಂದೇ ರಸ್ತೆಯಲ್ಲಿ ಸಾಗುವಂತೆ ಬದಲಿ ವ್ಯವಸ್ಥೆ ಮಾಡಿದ್ದರು. ಈ ಸಂದರ್ಭದಲ್ಲಿ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ವೇಗವಾಗಿ ಒಂದೇ ರಸ್ತೆಯಲ್ಲಿ ಚಲಿಸಿದ ಪರಿಣಾಮ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
Advertisement
Advertisement
ಈ ಅಪಘಾತದಲ್ಲಿ ಬೆಂಗಳೂರಿನ ಚಿಕ್ಕಬಿದರಕಲ್ಲಿನ ನಿವಾಸಿಯಾದ ಬೈಕ್ ಸವಾರ ಗೋವಿಂದರಾಜು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
Advertisement
ಅಲ್ಲದೆ ಕ್ಯಾಪ್ಟನ್ ರಾಜೇಂದ್ರರವರು ತಮ್ಮ ಜಿಲ್ಲಾಧಿಕಾರಿ ಕಚೇರಿ ಹಾಗೂ ವಸತಿಗೃಹದ ಬಳಿಯ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ಹಮ್ಸ್ ಹಾಕಲು ಸೂಚಿಸಿದ್ದಾರೆ. ಕಳೆದ ವಾರವೇ ಹೆದ್ದಾರಿಯ ಎರಡು ಕಡೆಗಳಲ್ಲಿ ಅವೈಜ್ಞಾನಿಕವಾಗಿ ಹಮ್ಸ್ ನಿರ್ಮಾಣವಾಗಿದ್ದು, ವಾಹನ ಸವಾರರಿಗೆ, ಅಂಬ್ಯೂಲೆನ್ಸ್ ಗಳಿಗೂ ಸಾಕಷ್ಟು ಕಿರಿಕಿರಿ ಉಂಟುಮಾಡಿದೆ. ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಹಮ್ಸ್ ಮಾಡುವುದು ಒಳ್ಳೆಯದು. ಆದರೆ ಮೊದಲಿದ್ದ ಹಮ್ಸ್ ಗಳನ್ನು ತೆಗೆದು ಅವೈಜ್ಞಾನಿಕವಾಗಿ ಎತ್ತರದ ಹಮ್ಸ್ ನಿರ್ಮಾಣ ನಡೆಸುವ ವೇಳೆ ಈ ಅಪಘಾತ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Advertisement
ಅಪಘಾತ ನಡೆದ ಹಿನ್ನಲೆಯಲ್ಲಿ ಬೆಂಗಳೂರು ನಿಂದ ಮೈಸೂರು ಕಡೆಗೆ ಹಾಗೂ ಮೈಸೂರುನಿಂದ ಬೆಂಗಳೂರು ಕಡೆಗೆ ಚಲಿಸುವ ಎರಡು ಬದಿ ರಸ್ತೆಯಲ್ಲಿ 4 ಕಿ.ಮೀ ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಸ್ಥಳಕ್ಕೆ ಬಂದ ರಾಮನಗರ ಸಂಚಾರಿ ಪೊಲೀಸರು ಟ್ರಾಫಿಕ್ ಜಾಮ್‍ನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.