ರಾಮನಗರ: ನನಗೆ ಎಲ್ಲೆಲ್ಲಿ ಚಡ್ಡಿ ಹೊಲಿಸಿ ಕೊಡಲಾಗಿದೆ ಅಥವಾ ಅವರದೇ ಚಡ್ಡಿ ಕಳೆದು ನನಗೆ ಹೊಲಿಸಿಕೊಟ್ಟಿದ್ದಾರಾ ಎನ್ನುವುದನ್ನು ರೇವಣ್ಣನವರೇ ಹೇಳಬೇಕೆಂದು ಹೇಳುವ ಮೂಲಕ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ತಿರುಗೇಟು ನೀಡಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಸ್ಥಾನಕ್ಕೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ರಾಮನಗರ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ತೆರಳಿ ಶಿಕ್ಷಕರ ಬಳಿ ಮತಯಾಚನೆ ನಡೆಸಿದರು. ಇದೇ ವೇಳೆ ಚಡ್ಡಿ ಹಾಕದೆ ಜೈಲಿನಲ್ಲಿ ನಿಂತಿದ್ದ ಅವರನ್ನು ಕರೆತಂದೆ ಎಂಬ ಎಚ್.ಡಿ ರೇವಣ್ಣ ಹೇಳಿಕೆ ವಿಚಾರವಾಗಿ ರಾಮನಗರದ ಬಿಜಿಎಸ್ ವರ್ಡ್ ಸ್ಕೂಲ್ ಬಳಿ ಮಾತನಾಡಿದ ಅವರು ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.
ಚಡ್ಡಿ ಹಾಕದೇ ಜೈಲಿನಲ್ಲಿ ಪುಟ್ಟಣ್ಣನ್ನು ನಿಲ್ಲಿಸಿದ್ರು. ನಾನೇ ಕರೆದುಕೊಂಡು ಹೋದೆ ಎಂದು ರೇವಣ್ಣನವರೇ ಹೇಳಿದ್ದಾರೆ. ಅವರೇ ಕಾಡಂಕನಹಳ್ಳಿಗೆ ಬಂದು ನನಗೆ ಚಡ್ಡಿ ಹಾಕಿ ಕರೆದುಕೊಂಡು ಹೋಗಿದ್ದು. ಅವರನ್ನೇ ಕೇಳಿ ಎಲ್ಲೆಲ್ಲಿ ಚಡ್ಡಿ ಹೊಲಿಸಿಕೊಟ್ಟಿದ್ದಾರೆ. ರಾಜ್ಯಕ್ಕೆಲ್ಲಾ ಇವರೇ ಚಡ್ಡಿ ಕೊಡಿಸಿಬಿಟ್ಟಿರುವವರು, ದೊಡ್ಡವರು ಮಾತನಾಡಬೇಕಾದರೆ ಇತಿಮಿತಿ ಇರಬೇಕು. ನಮಗೂ ಮಾತನಾಡಲು ಬರುತ್ತೆ ನಾವೇನು ದಡ್ಡರಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನು ಓದಿ: ಜೈಲಿನಲ್ಲಿ ಚಡ್ಡಿ ಹಾಕಿ ನಿಂತಿದ್ದ ಪುಟ್ಟಣ್ಣಗೆ ಟಿಕೆಟ್ ನೀಡಿದ್ದು ಜೆಡಿಎಸ್ – ರೇವಣ್ಣ ವಾಗ್ದಾಳಿ
ಪ್ರತಿಯೊಬ್ಬರಿಗೂ ಅವರದೇ ಆದ ಸ್ವಾಭಿಮಾನ ಇದ್ದು ಕೂಲಿ ಮಾಡುವವನಿಗೂ ಸ್ವಾಭಿಮಾನ ಇದೆ. ಎದುರಿಗೆ ಕರೆದು ಬಯ್ಯುವುದೇ ಬೇರೆ ಮಾಧ್ಯಮಗಳ ಮುಂದೆ ಹೇಳುವುದೇ ಬೇರೆ. ಅವರು ನಾಲಿಗೆ ಬಿಗಿಹಿಡಿದು ಮಾತನಾಡಿದರೆ ಸೂಕ್ತ ಎಂದರು.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರೇ ವೇದಿಕೆಯಲ್ಲಿ ಹೇಳಿದ್ದಾರೆ. ನಮ್ಮ ಪುಟ್ಟಣ್ಣ ನಮ್ಮ ಪಾರ್ಟಿಯಿಂದ ನಿಲ್ಲುತ್ತಾರೆ ಎಂದು ಸಿಎಂ ಹೇಳಿದ್ದಾರೆ. ಅವರ ಬಳಿ ನಂಬಿಕೆ ಉಳಿಸಿಕೊಳ್ಳುವ ಶಕ್ತಿ ನಮಗೆ ಭಗವಂತ ಕೊಡಬೇಕು. ಈಗಾಗಲೇ ಯಾರ್ಯಾರು ನಂಬಿಕೆ ಕಳೆದುಕೊಂಡವರು ಕುಸಿದಿದ್ದಾರೆ. ಕುಸಿಯುತ್ತಾ ಇದ್ದಾರೆ ಅದನ್ನ ನೋಡುತ್ತಿದ್ದೀರಿ. ಮೋದಿ ಹಾಗೂ ಯಡಿಯೂರಪ್ಪ ನೇತೃತ್ವದ ನಾಯಕತ್ವ ಒಪ್ಪಿಕೊಂಡಿದ್ದೇನೆ ನೂರಕ್ಕೆ ನೂರರಷ್ಟು ಬಿಜೆಪಿಯಿಂದ ಸ್ಪರ್ಧಿಸಿ, ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.