ರಾಮನಗರ: ಬೊಂಬೆನಗರಿ ಚನ್ನಪಟ್ಟಣದಲ್ಲಿ ಓರ್ವ ಪವಾಡ ಪುರುಷ ಕಾಣಿಸಿಕೊಂಡಿದ್ದು, ಶಿರಿಡಿ ಸಾಯಿಬಾಬಾ, ಪುಟ್ಟಪರ್ತಿ ಸತ್ಯ ಸಾಯಿಬಾಬಾರ ಅವತಾರವೆಂದು ದರ್ಶನ ಪಡೆಯಲು ಭಕ್ತರು ಮುಗಿಬಿದ್ದಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ.
ಮಹಾರಾಷ್ಟ್ರದಿಂದ ಚನ್ನಪಟ್ಟಣಕ್ಕೆ ಪ್ರೇಮ್‍ಸಾಯಿ ಆಗಮಿಸಿದ್ದು ಶಿರಡಿ ಸಾಯಿಬಾಬಾ, ಸತ್ಯಸಾಯಿಬಾಬಾರ ಅವತಾರ ಪುರುಷ ಎಂದು ಜನ ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಕಳೆದ ಒಂದು ವಾರದ ಹಿಂದೆಯೇ ಪ್ರೇಮ್ ಸಾಯಿ ಮಹಾರಾಷ್ಟ್ರದಿಂದ ಚನ್ನಪಟ್ಟಣಕ್ಕೆ ಆಗಮಿಸಿದ್ದಾರೆ. ಮೊದಲಿಗೆ ನಗರದ ಹೊರವಲಯದಲ್ಲಿನ ಚಿಕ್ಕಮಳೂರಿನ ಸ್ಮಶಾನದಲ್ಲಿನ ಪುಟ್ಟಸ್ವಾಮಿಗೌಡರ ಸಮಾಧಿಯ ಮೇಲೆ ಕುಳಿತಿದ್ದಾರೆ. ಈ ವೇಳೆ ಕೆಲವು ಜನ ಪ್ರೇಮ್‍ಸಾಯಿ ಬಳಿ ಹೋಗಿದ್ದು ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಈ ವೇಳೆ ಕೆಲವರಿಗೆ ವಿಭೂತಿ ನೀಡಿದ್ದು ಕೆಲವರಿಗೆ ತಾಯತವನ್ನು ನೀಡಿದ್ದಾರೆ.
ಎರಡು ದಿನಗಳ ಹಿಂದೆ ಶಿಕ್ಷಕರೊಬ್ಬರ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಪ್ರೇಮ್ ಸಾಯಿಯನ್ನು ಮಂಗಳವಾರ ಪೇಟೆಯ ಪ್ರಕಾಶ್ ತಮ್ಮ ಮನೆಗೆ ಬರುವಂತೆ ಆಹ್ವಾನ ನೀಡಿದ್ದಕ್ಕೆ ಸಮ್ಮತಿಸಿ ಮನೆಗೆ ಬಂದಿದ್ದಾರೆ. ಅವರ ಮನೆಯಲ್ಲೇ ವಾಸ್ತವ್ಯ ಹೂಡಿದ್ದು ದರ್ಶನ ಪಡೆಯಲು ಬರುತ್ತಿರುವ ಭಕ್ತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಚೀಟಿಯಲ್ಲಿ ಬರೆದು ನೀಡುತ್ತಿದ್ದಾರೆ. ಸಮಸ್ಯೆಗಳನ್ನು ಹೇಳಿಕೊಂಡು ಬರುವ ಭಕ್ತರಲ್ಲಿ ಕೆಲವರನ್ನು ಕರೆದು ವಿಭೂತಿ ನೀಡುವುದು, ಸಾಯಿಬಾಬಾರ ಫೋಟೋ ನೀಡುವುದು ಹಾಗೂ ಸಿಹಿ ತಿನಿಸುಗಳನ್ನು ಸಹ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಪವಾಡ ಪುರುಷ ಪ್ರೇಮ್‍ಸಾಯಿಯ ವಿಚಾರ ತಿಳಿಯುತ್ತಿದ್ದಂತೆ ಭಕ್ತರ ದಂಡು ಸಹ ಹರಿದುಬರುತ್ತಿದ್ದು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಬೆಳಗ್ಗೆ 8 ರಿಂದ 9 ಗಂಟೆವರೆಗೆ ಹಾಗೂ ಸಾಯಂಕಾಲದ 5 ಗಂಟೆ ಬಳಿಕ ಭಕ್ತಾದಿಗಳಿಗೆ ದರ್ಶನ ನೀಡುತ್ತಿದ್ದಾರೆ. ಅಲ್ಲದೇ ರಾತ್ರಿಯ ವೇಳೆ ಭಕ್ತರು ಭಜನೆ ಸಹ ಮಾಡುತ್ತಿದ್ದು, ಪ್ರೇಮ್‍ಸಾಯಿಯನ್ನು ಕಂಡು ಅವತಾರ ಪುರುಷ ಎನ್ನುತ್ತಿದ್ದಾರೆ ಭಕ್ತರು.
ಮೈಸೂರಿನಲ್ಲಿ ವ್ಯಾಸಂಗ ಮಾಡ್ತಿರುವ ಪ್ರಕಾಶ್ ಅವರ ಪುತ್ರಿ ಸಪ್ತಮಿಗೆ ಮೂರು ದಿನಗಳಿಂದ ಜ್ವರ, ಮೈ ಕೈ ನೋವು ಎಂದು ಮಲಗಿದ್ದಳು. ಆಸ್ಪತ್ರೆಗೆ ಹೋದರೂ ಜ್ವರ ಕಡಿಮೆಯಾಗಿರಲಿಲ್ಲ. ಹೀಗಾಗಿ ಇಂದು ಮನೆಗೆ ವಾಪಸ್ಸಾಗಿದ್ದಾಳೆ ಈ ವೇಳೆ ಮನೆಯಲ್ಲಿಯೇ ವಾಸ್ತವ್ಯ ಹೂಡಿರುವ ದರ್ಶನ ಪಡೆಯಲು ಮುಂದಾದಾಗ ತಲೆ ಮುಟ್ಟಿ ಮಾತನಾಡಿಸಿದ ಕೆಲವೇ ಕ್ಷಣಗಳಲ್ಲಿ ಜ್ವರ, ಮೈ ಕೈ ನೋವು ಮಾಯವಾಗಿದ್ರೆ, ಇನ್ನೋರ್ವ ಗೋಪಾಲಯ್ಯ ಎಂಬವರು ಈ ಹಿಂದೆ ಸತ್ಯಸಾಯಿಯವರನ್ನು ಪ್ರಶ್ನಿಸಿಕೊಂಡು ಪುಟ್ಟಪರ್ತಿಗೆ ಹೋಗಿದ್ದೆ. ಆಗ ಅವರು ಚೋರ್ ಚೋರ್ ಆಗಯಾ ಎಂದು ಕರೆದಿದ್ದರು. ಇಂದು ಈ ಪ್ರೇಮ್ ಸಾಯಿಯವರ ಬಳಿ ಬಂದಾಗಲೂ ಸಹ ಅದೇ ರೀತಿ ದೇಖೋ ಚೋರ್ ಆಗಾಯಾ ಅಂದರ್ ಆವ್ ಬೇಟಾ ಎಂದು ಕರೆದರು ಎಂದು ತಿಳಿಸಿದರು.
ಪವಾಡಪುರುಷ ಪ್ರೇಮ್‍ಸಾಯಿ ಕೆಲವೇ ಕೆಲವು ದಿನಗಳು ಮಾತ್ರ ಇಲ್ಲಿ ಇರುವುದಾಗಿ ತಿಳಿಸಿರೋದ್ರಿಂದ ಭಕ್ತರ ದಂಡು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಲದೇ ಜನ ಮರುಳೋ, ಜಾತ್ರೆ ಮರುಳೋ ಅನ್ನೋ ರೀತಿ ಕಷ್ಟಗಳನ್ನು ಹೇಳಿಕೊಂಡುಬರುವವರು ಸಹ ಪವಾಡಗಳಿಗೆ ಮರುಳಾಗಿದ್ದಾರೆ.