ರಾಮನಗರ: ಜಮ್ಮುವಿನ ಉಧಂಪುರದ ತಾರಪುರ ಕ್ಯಾಂಪ್‍ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯೋಧ ವೆಂಕಟ ನರಸಿಂಹಮೂರ್ತಿ ಅಂತ್ಯಕ್ರಿಯೆಯು ಅವರ ಹುಟ್ಟೂರು ಮಾಗಡಿಯಲ್ಲಿ ಶುಕ್ರವಾರ ಯಾವುದೇ ಸರ್ಕಾರಿ ಗೌರವವಿಲ್ಲದೇ ನೆರವೇರಿತು.
ವೆಂಕಟ ನರಸಿಂಹಮೂರ್ತಿ ಅವರ ಪೋಷಕರು ಮಗನ ಮೃತ ದೇಹಕ್ಕಾಗಿ ಮೂರು ದಿನಗಳಿಂದ ಕಾಯುತ್ತಿದ್ದರು. ಸೇನೆಯ ಸಿಬ್ಬಂದಿ ವೆಂಕಟ ಅವರ ಮೃತ ದೇಹವನ್ನು ಗುರುವಾರ ರಾತ್ರಿ ಯೋಧನ ಹುಟ್ಟೂರು ಮಾಗಡಿಯ ಹೊಂಬಾಳಮ್ಮಪೇಟೆಯಲ್ಲಿ ಹಸ್ತಾಂತರಿಸಿದ್ದರು.
Advertisement
Advertisement
ಹೊಂಬಾಳಮ್ಮನ ಪೇಟೆಯಲ್ಲಿ ರಾತ್ರಿ ಹಾಗೂ ಇಂದು ಯೋಧ ವೆಂಕಟ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕರು ಯೋಧನ ಅಂತಿಮ ದರ್ಶನ ಪಡೆದರು. ನಂತರ ವೆಂಕಟ ನರಸಿಂಹಮೂರ್ತಿ ಅವರ ಕುಟುಂಬಸ್ಥರು ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು. ಈ ವೇಳೆ ಯೋಧ ವೆಂಕಟ ಅವರ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
Advertisement
ಆತ್ಮಹತ್ಯೆಯೋ, ಕೊಲೆಯೋ?
ಯೋಧ ವೆಂಕಟ ನರಸಿಂಹಮೂರ್ತಿ ಜಮ್ಮುವಿನಲ್ಲಿ ಕರ್ತವ್ಯದಲ್ಲಿ ಇದ್ದ ಸಮಯದಲ್ಲಿ ತನ್ನ ಇಬ್ಬರು ಸಹೋದ್ಯೋಗಿಗಳಾದ ಮಹಮ್ಮದ್ ತಸ್ಲೀಮ್ ಮತ್ತು ಸಂಜಯ್ ಠಾಕ್ರೆ ಜೊತೆಗೆ ಜಗಳ ಮಾಡಿಕೊಂಡಿದ್ದರು. ಆದರೆ ಮಾತಿಗೆ ಮಾತು ಬೆಳೆದು, ಅದು ವಿಕೋಪಕ್ಕೆ ತಿರುಗಿ ವೆಂಕಟ ಅವರು ತಮ್ಮ ಸರ್ವೀಸ್ ರಿವಾಲ್ವರ್ ನಿಂದ ಇಬ್ಬರಿಗೂ ಗುಂಡಿಕ್ಕಿದ್ದರು. ಬಳಿಕ ತಾವು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಯೋಧ ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ಗೌರವ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಅರ್ಚನಾ ತಿಳಿಸಿದ್ದಾರೆ.
Advertisement
ಈ ಘಟನೆ ನಡೆಯುವ ಎರಡು ದಿನಗಳ ಮೊದಲು ತಂದೆಗೆ ಕರೆ ಮಾಡಿದ್ದ ಯೋಧ ವೆಂಕಟ ಅವರು, ನನಗೆ ಇಲ್ಲಿ ತುಂಬಾ ಒತ್ತಡವಿದೆ. ಸಾಕಷ್ಟು ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ಅಳಲು ತೊಡಿಕೊಂಡಿದ್ದರು. ಅದಾದ ಬಳಿಕ ವೆಂಕಟ ಅವರ ಮೊಬೈಲ್ ಸ್ವಿಚ್‍ಆಫ್ ಆಗಿತ್ತು. ನಮ್ಮ ಮಗ ಸಹೋದ್ಯೋಗಿಗಳ ಕಿರುಕುಳದಿಂದ ಸಾವನ್ನಪ್ಪಿದಾನೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ವೆಂಕಟ ಅವರ ತಂದೆ ನರಸಿಂಹಮೂರ್ತಿ ಒತ್ತಾಯಿಸಿದ್ದಾರೆ.