ರಾಮನಗರ: ಚಲಿಸುತ್ತಿದ್ದ ಲಾರಿಯಿಂದ ತಿರುವಿನಲ್ಲಿ ಭಾರೀ ಗಾತ್ರದ ಎರಡು ಕಲ್ಲುಗಳು ರಸ್ತೆಗೆ ಜಾರಿಬಿದ್ದ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರೇಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬೆಳಗ್ಗೆ ಹಾಸನದಿಂದ ಚನ್ನಪಟ್ಟಣಕ್ಕೆ ಮಾಗಡಿ ಮಾರ್ಗವಾಗಿ ನಿಸರ್ಗ ಟ್ರಾನ್ಸ್ ಪೋರ್ಟ್ ಗೆ ಸೇರಿದ ಐದು ಲಾರಿಗಳು ತೆರಳುತ್ತಿದ್ದವು. ವೀರೇಗೌಡನದೊಡ್ಡಿ ಗ್ರಾಮದ ಬಳಿ ಬಂದ ವೇಳೆ ಗ್ರಾಮದ ತಿರುವಿನಲ್ಲಿ ವೇಗದಲ್ಲಿದ್ದ ಲಾರಿಯಿಂದ 30-30 ಟನ್ ತೂಕದ ಎರಡು ಕಲ್ಲಿನ ದಿಮ್ಮಿಗಳು ಲಾರಿಯಿಂದ ಉರುಳಿ ಬಿದ್ದಿವೆ.
Advertisement
ಬೆಳಗಿನ ಸಮಯವಾದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ. ಕಲ್ಲು ಬಿದ್ದ ರಭಸಕ್ಕೆ ರಸ್ತೆಗೆ ಹಾಕಿದ್ದ ಟಾರು ಜೆಲ್ಲಿ ಕಲ್ಲುಗಳ ಸಮೇತ ಕಿತ್ತು ಬಂದಿದೆ. ಒಂದೇ ಲಾರಿಯಲ್ಲಿ ಎರಡು ಕಲ್ಲುಗಳನ್ನು ಯಾವುದೇ ರೀತಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೇ ಹಾಕಿಕೊಂಡು ಸಾಗಿಸಲಾಗುತ್ತಿತ್ತು. ಸ್ವಲ್ಪ ಮುಂದೆ ಹೋಗಿ ಉರುಳಿದ್ದರೆ ರಸ್ತೆ ಬದಿಯಲ್ಲಿನ ಮನೆಗೆ ಹಾನಿಯಾಗುತ್ತಿತ್ತು.
Advertisement
Advertisement
ಈ ಕಲ್ಲುಗಳ ಸಾಗಾಣಿಕೆ ಮಾಡುವ ಲಾರಿಗಳ ಚಾಲಕರು ವೇಗದಲ್ಲಿ ಚಲಾಯಿಸುವುದು ಸಾಮಾನ್ಯವಾಗಿದೆ. ಪ್ರತಿನಿತ್ಯ ಜಿಲ್ಲೆಯಲ್ಲಿ ರಾತ್ರಿಯ ವೇಳೆ ನೂರಾರು ಲಾರಿಗಳು ಕಲ್ಲುಗಳನ್ನು ಹೊತ್ತು ಸುರಕ್ಷಿತ ಕ್ರಮಗಳಿಲ್ಲದೇ ಸಂಚರಿಸುತ್ತಿವೆ.
Advertisement
ಕಲ್ಲು ಬಿದ್ದ ಸ್ಥಳಕ್ಕೆ ಗ್ರಾಮಸ್ಥರು ಆಗಮಿಸಿ ಮುಂದೆ ಸಾಗುತ್ತಿದ್ದ ಲಾರಿಯನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.