ರಾಮನಗರ: ರಾಜ್ಯ ಸರ್ಕಾರ ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಒಂದು ವಾರ ಕರ್ನಾಟಕ ಸ್ಥಬ್ದಗೊಳಿಸಿರುವುದು ಸುಮ್ಮನೆ ಪ್ರಚಾರಕ್ಕೋಸ್ಕರ ಹೀಗೆ ಮಾಡುವುದು ಸರಿಯಲ್ಲ. ಇಲ್ಲಿಯ ತನಕ ಆಸ್ಪತ್ರೆಯ ವಿಚಾರದಲ್ಲಿ ಮೆಡಿಕಲ್ ಕಾಲೇಜುಗಳ ಚೇರ್‍ಮನ್‍ಗಳ ಸಭೆ ನಡೆಸಿಲ್ಲ. ಏನ್ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ. ಬೇಸಿಕ್ ಕಾಮನ್‌ಸೆನ್ಸ್‌ನಲ್ಲಿ ನಮ್ಮ ರಾಜ್ಯ ಸರ್ಕಾರ ಎಡವಿದೆ ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿಕೆ ಶಿವಕುಮಾರ್ ಕನಕಪುರದಲ್ಲಿ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರ ಕನಕಪುರಕ್ಕೆ ಇಂದು ಭೇಟಿ ನೀಡಿದರು. ಮೊದಲಿಗೆ ಮನೆ ದೇವತೆ ಕೆಂಕೇರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ತಮ್ಮ ನಿವಾಸಕ್ಕೆ ತೆರಳಿ ಸ್ವಾಗತ ಹಾಗೂ ಶುಭಾಶಯ ಕೋರಲು ಬಂದಿದ್ದ ಕಾರ್ಯಕರ್ತರು, ಮುಖಂಡರನ್ನು ಭೇಟಿ ಮಾಡಿದರು.
ಇದೇ ವೇಳೆ ಮಾತನಾಡಿದ ಅವರು ಕೊರೊನಾ ವೈರಸ್ ತಡೆಗಟ್ಟುವ ವಿಚಾರದಲ್ಲಿ ರಾಜ್ಯ ಸರ್ಕಾರ ಮೊದಲು ಮೆಡಿಕಲ್ ಕಾಲೇಜುಗಳ ಚೇರ್‍ಮನ್‍ಗಳ, ಆಸ್ಪತ್ರೆ ಹೆಡ್‍ಗಳನ್ನು ಕರೆದು ಏನ್ ಕೆಲಸ ಮಾಡಬೇಕೋ ಅದನ್ನು ಮಾಡಬೇಕು. ಹೊರಗಡೆಯಿಂದ ಬರುವವರನ್ನು ಹೇಗೆ ನಿಲ್ಲಿಸಬೇಕು. ಅವರನ್ನ ಹೇಗೆ ಚೆಕಫ್ ಮಾಡಬೇಕೋ ಅದನ್ನ ಮಾಡಿ. ಅದನ್ನ ಏನೂ ಮಾಡದೇ ಸುಮ್ಮನೇ ಹಳ್ಳಿಯಲ್ಲಿ ವಾಸ್ತವ್ಯ ಹೂಡುವುದರಿಂದ ಏನು ಪ್ರಯೋಜನವಿಲ್ಲ ಎಂದು ರಾಜ್ಯ ಸರ್ಕಾರ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಆರೋಗ್ಯ ವಿಚಾರದಲ್ಲಿ ಮುಂಜಾಗ್ರತಾ ಕ್ರಮ ಏನೇನು ಬೇಕು ತೆಗೆದುಕೊಳ್ಳಲಿ ಅದಕ್ಕೆ ನಮ್ಮದು ಸಂಪೂರ್ಣ ಸಹಕಾರವಿದೆ. ಆದರೆ ರಾಜ್ಯ, ಕೇಂದ್ರ ಸರ್ಕಾರಗಳು ಜನರಲ್ಲಿ ಆತಂಕ, ಭಯ ಹುಟ್ಟಿಸುವ ಕೆಲಸ ಮಾಡುತ್ತಿವೆ ಇದು ಸರಿಯಲ್ಲ. ದಿನಕ್ಕೆ ನೂರು ಜನರಿಗೆ ಫೋನ್ ಮಾಡಿದರು ಒಂದೊಂದು ನಿಮಿಷ ಕೆಮ್ಮುವುದೇ ಕೇಳುತ್ತೆ. ಕೆಮ್ಮುವುದು ಕೇಳಿ ನಿಮಗೂ ಕೆಮ್ಮು ಜ್ವರ ಬಂದುಬಿಡುತ್ತದೆ. ನನಗೂ ಕೆಮ್ಮು ಜ್ವರ ಬರುತ್ತಿದೆ ಎಂದರು.
ಆರೋಗ್ಯ ಸಚಿವ ಹಾಗೂ ವೈದ್ಯಕೀಯ ಸಚಿವರ ನಡುವೆ ಹೊಂದಾಣಿಕೆಯಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು, ಯಾವ ಆರೋಗ್ಯ ಸಚಿವರೋ, ವೈದ್ಯಕೀಯ ಸಚಿವರೋ ನಾನ್ಯಾಕೆ ಅವರ ಸುದ್ದಿಗೆ ಹೋಗಲಿ. ಸರ್ಕಾರಗಳು ಕೊರೊನಾ ವಿಚಾರವಾಗಿ ಪ್ರತ್ಯೇಕ ಬಜೆಟ್ ಇಡಲಿ ನಷ್ಟವಾಗಿರುವ ಜನರ ಬದುಕಿಗೆ ನೆರವಾಗುವಂತಹ ಕೆಲಸ ಮಾಡಲಿ ಎಂದು ಹೇಳಿದರು.
ಕೊರೊನಾ ಎಫೆಕ್ಟ್ ನಿಂದ ನಮ್ಮಲ್ಲಿ ಕೋಳಿ 20 ರೂಪಾಯಿ ಆದರೂ ಕೇಳುವವರೇ ಇಲ್ಲದಂತಾಗಿದೆ. ಅಲ್ಲದೇ ತರಕಾರಿ 5 ರೂಪಾಯಿಗೆ ಕೊಡುವವರಿಲ್ಲದಂತಾಗಿದೆ. ಸರ್ಕಾರ ಈ ಬಗ್ಗೆ ಪ್ರತ್ಯೇಕ ಬಜೆಟ್ ಮಂಡಿಸಲಿ. ನಷ್ಟವಾಗಿರುವವರ ನೆರವಿಗೆ ಸರ್ಕಾರ ಮುಂದಾಗಬೇಕಿದೆ. ಒಂದು ವಾರ, 15 ದಿನ ಬಂದ್ ಮಾಡಿದ್ದೀರಲ್ಲ. ಬ್ಯಾಂಕ್‍ಗಳಲ್ಲಿ ರೈತರಿಗೆ, ಜನರಿಗೆ ಬಡ್ಡಿ ಕೊಟ್ಟವರೇ, ಅದನ್ನು ಬಂದ್ ಮಾಡಲಿ. ಬಡ್ಡಿ ಮಾತ್ರ ಹಗಲು ರಾತ್ರಿ ಓಡುತ್ತಾನೆ ಇರುತ್ತೆ, ಸಾಲ ತೆಗೆದುಕೊಂಡವರ ಪರಿಸ್ಥಿತಿ ಏನಾಗಬೇಕು. ವ್ಯವಹಾರ ಮಾಡಿದವರ ಬದುಕು ಏನಾಗಬೇಕು. ಅವರ ಬದುಕಿಗೆ ನಾವು ನೆರವಾಗಬೇಕು ಎಂದರು.
ಹಳೇ ಮೈಸೂರು ಭಾಗದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜೊತೆಗಿನ ಸ್ನೇಹದ ಜೊತೆಗೆ ಪಕ್ಷ ಸಂಘಟನೆ ಯಾವ ರೀತಿ ಮಾಡುತ್ತೀರಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಕಾರ್ಯಕರ್ತರನ್ನು ಉಳಿಸಬೇಕಿದೆ ಪಕ್ಷದ ಸಿದ್ಧಾಂತಗಳು ವಿಭಿನ್ನವಾಗಿರುತ್ತೆ. ಅವರವರ ಪಕ್ಷದ ಸಿದ್ಧಾಂತ ಅವರವರು ಪಾಲಿಸುತ್ತಾರೆ. ನಾವು ನಮ್ಮ ಪಕ್ಷದ ಸಿದ್ಧಾಂತ ಪಾಲಿಸುತ್ತಾರೆ. ಅಷ್ಟೇ ಅಲ್ಲದೆ ಈಗ ವಿರೋಧ ಪಕ್ಷದಲ್ಲಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ನಾಯಕರಿದ್ದಾರೆ. ನಮಗೆ ಇದು ಒಂದು ಹುದ್ದೆ ಅಲ್ಲ ಒಂದು ಜವಾಬ್ದಾರಿ ಎಂದು ತಿಳಿಸಿದರು.





