ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದ ಏಸು ಪ್ರತಿಮೆ ವಿವಾದ ರಾಜ್ಯದಾದ್ಯಂತ ಸಾಕಷ್ಟು ಸದ್ದು ಮಾಡಿ, ಇದೀಗ ತಕ್ಕಮಟ್ಟಿಗೆ ಸೈಲೆಂಟ್ ಆಗಿದೆ. ಆದರೆ ವರದಿ ಕೇಳಿದ್ದ ಕಂದಾಯ ಸಚಿವರು ಇನ್ನೂ ಕೂಡಾ ವರದಿಯನ್ನ ಪಡೆಯುವ ಮನಸ್ಸು ಮಾತ್ರ ಮಾಡಿಲ್ಲ. ಇದೀಗ ಕಪಾಲ ಬೆಟ್ಟದ ವಿಚಾರಕ್ಕೆ ಮತ್ತೆ ಕಿಚ್ಚು ಹತ್ತಿಕೊಳ್ಳುವ ಲಕ್ಷಣಗಳು ಜಿಲ್ಲೆಯಲ್ಲಿ ಕಾಣಿಸಿಕೊಳ್ತಿದ್ದು, ಶಿವರಾತ್ರಿ ಜಾಗರಣೆ ಮಾಡಲು ಅವಕಾಶ ನೀಡುವಂತೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರು ಇದೇ ಫೆಬ್ರವರಿ 21 ರಂದು ಶಿವರಾತ್ರಿ ವಿಶೇಷವಾಗಿ ಕಪಾಲ ಬೆಟ್ಟದಲ್ಲಿ ಜಾಗರಣ ಮಾಡಲು ಅನುಮತಿ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾರ ಬಳಿ ಮನವಿ ಪತ್ರ ಸಲ್ಲಿಸಿದ್ದಾರೆ.
ಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬವಾಗಿದೆ. ಶಿವರಾತ್ರಿಯ ಅಂಗವಾಗಿ ಜಾಗರಣೆಯನ್ನ ಕಪಾಲಿ ಬೆಟ್ಟದಲ್ಲಿ ಆಯೋಜಿಸಲು ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ಕಾಲಭೈರವೇಶ್ವರನ ಸ್ವರೂಪವಾದ ಶ್ರೀಮುನೇಶ್ವರ ಸ್ವಾಮಿಯ ನಾಮಸ್ಮರಣೆ, ಜಪತಪ, ಭಜನೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಸೇನೆಯ ಶಿವು ಭಗತ್ ತಿಳಿಸಿದರು.
ಸಂಘಟನೆಯ ಮನವಿಯನ್ನ ಸ್ವೀಕರಿಸಿದ್ದು, ಜಾಗರಣೆ ವಿಚಾರವಾಗಿ ಅನುಮತಿ ಪಡೆಯುವುದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಳುಹಿಸಿಕೊಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಾಗರಣೆಗೆ ಅನುಮತಿ ನೀಡದಿದ್ದರೂ ಸಹ ಶಿವರಾತ್ರಿ ಜಾಗರಣೆಯನ್ನು ಕಪಾಲ ಬೆಟ್ಟದಲ್ಲಿಯೇ ಮಾಡಿಯೇ ತೀರುವುದಾಗಿ ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರು ಹೇಳಿದ್ದಾರೆ.