Connect with us

Districts

ಬಿಬಿಎಂಪಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸಿದ್ದ ಖತರ್ನಾಕ್ ದಂಪತಿ ಜೈಲುಪಾಲು

Published

on

ರಾಮನಗರ: ಬಿಬಿಎಂಪಿಯಲ್ಲಿ ಹಾಗೂ ಸರ್ಕಾರಿ ಕೆಲಸ ಕೊಡಿಸುವ ಆಮಿಷವೊಡ್ಡಿ ಪದವೀಧರರಿಂದ ಲಕ್ಷಾಂತರ ರೂಪಾಯಿ ಪೀಕುತ್ತಿದ್ದ ಜಿಲ್ಲೆಯ ಖತರ್ನಾಕ್ ದಂಪತಿ ಜೈಲುಪಾಲಾಗಿದ್ದಾರೆ.

ಕನಕಪುರ ತಾಲೂಕಿನ ಯಡುವನಹಳ್ಳಿ ಗ್ರಾಮದ ಚೇತನ್ ಹಾಗೂ ಕನಕಪುರದ ಹೌಸಿಂಗ್ ಬೋರ್ಡ್ ನಿವಾಸಿ ಬೇಬಿ ಬೆನಕಜಾದವ್ ನಿರುದ್ಯೋಗಿ ಯುವಕರಿಗೆ ಮೋಸ ಮಾಡಿದ ದಂಪತಿ. ಆರೋಪಿ ಚೇತನ್ ತಾನು ಬಿಬಿಎಂಪಿಯಲ್ಲಿ ಮುಖ್ಯ ಹಿರಿಯ ಅಧಿಕಾರಿ ಎಂದು ಲೆಟರ್‍ಹೆಡ್, ಸೀಲು, ತಯಾರಿಸಿಕೊಂಡಿದ್ದ. ಆ ಮೂಲಕ ಯುವಕರಿಗೆ ಗಾಳ ಹಾಕಿದ್ದ ಚೇತನ್ ಬಿಬಿಎಂಪಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಬರೋಬ್ಬರಿ 70ಕ್ಕೂ ಹೆಚ್ಚು ಯುವಕರಿಗೆ ಪಂಗನಾಮ ಹಾಕಿದ್ದಾನೆ. ಸರ್ಕಾರಿ ಕೆಲಸ ಸಿಗುತ್ತೆ ಅಂತಾ ಸಾಲ ಮಾಡಿ, ಜಮೀನು ಮಾರಿ, ಒಡವೆಗಳನ್ನು ಅಡವಿಟ್ಟು ಹಣ ಕೊಟ್ಟ ಯುವಕರಿಗೆ ಇದೀಗ ದಿಕ್ಕು ತೋಚದಂತಾಗಿದೆ.

ಯುವಕರನ್ನೇ ಟಾರ್ಗೇಟ್ ಮಾಡಿಕೊಂಡಿದ್ದ ಚೇತನ್ ಪತ್ನಿ ಬೇಬಿ ಬೆನಕಜಾದವ್ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕರಿಂದ ಲಕ್ಷಾಂತರ ರೂಪಾಯಿ ಪೀಕಿದ್ದಾರೆ. ಕೆಲಸವಿಲ್ಲದೇ ಡಿಗ್ರಿ ಮಾಡಿ ಓಡಾಡುತ್ತಿದ್ದ ನಿರುದ್ಯೋಗಿ ಯುವಕರು ಕೆಲಸ ಸಿಗುತ್ತೆ ಅಂತೇಳಿ ಹಣ ಕೊಟ್ಟು ಇಂಗು ತಿಂದ ಮಂಗನಂತಾಗಿದ್ದರೆ, ಇದೀಗ ನಿರುದ್ಯೋಗಿ ಯುವಕರಿಗೆ ಪಂಗನಾಮ ಹಾಕಿದ್ದ ಕಿಲಾಡಿ ಜೋಡಿ ಪೊಲೀಸರ ಅತಿಥಿಯಾಗಿದ್ದಾರೆ.

ಬಿಬಿಎಂಪಿಯಲ್ಲಿ ಏನು ಕೆಲಸ:
ಬಿಬಿಎಂಪಿಯಲ್ಲಿ ಸರ್ಕಾರಿ ಕೆಲಸವಿದ್ದು 1 ಲಕ್ಷ ರೂಪಾಯಿ ಡೆಪಾಸಿಟ್ ಮಾಡಿದರೆ 23 ಸಾವಿರ ರೂ. ವೇತನ ನೀಡುತ್ತಾರೆ. ಅದರಲ್ಲಿ ಇಎಸ್‍ಐ, ಪಿಎಫ್ ಕಡಿತಗೊಳಿಸಿ 21 ಸಾವಿರ ರೂ. ವೇತನ ಸಿಗುತ್ತದೆ ಎಂದು ಕೆಲವು ಪದವೀಧರರಿಗೆ ಮೊದಲು ಚೇತನ್ ಹಾಗೂ ಬೇಬಿ ಬಲೆ ಬೀಸಿ ಅವರಿಂದ ಹಣವನ್ನ ಪೀಕಿದ್ದರು. ಅಷ್ಟೇ ಅಲ್ಲದೆ ಬಿಬಿಎಂಪಿಯ ನಕಲಿ ಲೆಟರ್‍ಹೆಡ್, ನಕಲಿ ಸೀಲ್‍ಗಳನ್ನು ಬಳಸಿಕೊಂಡು ಕೆಲವು ಯುವಕರಿಗೆ ಕೆಲಸದ ಅಪಾಯಿಂಟ್‍ಮೆಂಟ್ ಲೆಟರ್ ನೀಡಿದ್ದಾರೆ.

ಅಪಾಯಿಂಟ್‍ಮೆಂಟ್ ಲೆಟರ್ ಪಡೆದ ಯುವಕರಿಗೆ ಬಿಬಿಎಂಪಿಯ ಐಡಿ ಕಾರ್ಡ್ ಗಳನ್ನು ತಾವೇ ತಯಾರಿಸಿ ನೀಡಿದ್ದಾರೆ. ಜೊತೆಗೆ ಬೆಂಗಳೂರಿನ ವಾರ್ಡ್ ವಾರು ಸ್ವಚ್ಛತೆ ಬಗ್ಗೆ ಫೀಲ್ಡ್ ವರ್ಕ್ ಮಾಡಬೇಕು. ನಿಮ್ಮ ಕೆಲಸ ಬೆಂಗಳೂರಿನ ಶಿವಾಜಿನಗರ, ವಸಂತನಗೆ, ಜಯನಗರ, ಆರ್‍ಎಂಸಿ ಯಾರ್ಡ್, ಯಶವಂತಪುರ ಹೀಗೆ ವಾರ್ಡ್ ವಾರು ತೆರಳಿ ಕೆಲಸ ಮಾಡಬೇಕು. ಪ್ರತಿನಿತ್ಯ ಎಷ್ಟು ಗಂಟೆಗೆ ಬಿಬಿಎಂಪಿ ಕಸದ ವಾಹನ ಬಂತು ಎಷ್ಟು ಗಂಟೆಗೆ ಹೋಯಿತು. ವಾರ್ಡ್ ಸ್ವಚ್ಛವಾಗಿದೆಯಾ ಎಂದು ಪರಿಶೀಲನೆ ನಡೆಸುವುದು. ಅಲ್ಲದೇ ತಾವು ಕೆಲಸ ಮಾಡುತ್ತಿರುವ ಬಗ್ಗೆ ಎಲ್ಲಿದ್ದೀರಿ ಎಂಬ ಬಗ್ಗೆ ವಾಟ್ಸಪ್‍ನಲ್ಲಿ ಲೊಕೇಶನ್ ಶೇರ್ ಮಾಡಬೇಕು. ಕೆಲಸ ಮುಗಿದ ಬಳಿಕ ಕಚೇರಿಗೆ ಬಂದು ಸಹಿ ಮಾಡಿ ತೆರಳಬೇಕು ಎಂದು ತಿಳಿಸಿದ್ದರು.

ಈ ಫ್ರಾಡ್ ದಂಪತಿ ಬಳಿ ಸರ್ಕಾರಿ ಕೆಲಸ ಅಂತ ಸೇರಿದ್ದ ಅಲ್ಲದೇ ಮೊದಲು ಕೆಲಸಕ್ಕೆ ಸೇರಿದ್ದ ಯುವಕರಿಗೆ ಮೂರು ತಿಂಗಳು 21 ಸಾವಿರ ರೂಪಾಯಿಗಳ ಸಂಬಳವನ್ನು ಸಹ ನೀಡಿದ್ದರು. ಬಳಿಕ ಸೇರಿದ ನಿರುದ್ಯೋಗಿಗಳಿಗೆ ಅಪಾಯಿಂಟ್‍ಮೆಂಟ್ ಲೆಟರ್ ಕೊಡದ ಹಿನ್ನೆಲೆಯಲ್ಲಿ ಯುವಕರು ಪರಿಶೀಲನೆಗೆ ಇಳಿದಾಗ ದಂಪತಿಗಳ ಅಸಲಿ ಮುಖ ಹೊರಬಿದ್ದಿದೆ.

ಮೋಸ ಹೋಗಿದ್ದ 23 ಯುವಕರು ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖತರ್ನಾಕ್ ದಂಪತಿಯನ್ನ ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಬೆಂಗಳೂರಿನಲ್ಲೂ ಸಹ ಈ ಕಿಲಾಡಿಗಳ ಜಾಲ ಹರಡಿರುವ ಶಂಕೆಯೂ ವ್ಯಕ್ತವಾಗಿದೆ.

Click to comment

Leave a Reply

Your email address will not be published. Required fields are marked *