ರಾಮನಗರ: ಪ್ರಿಯಕರನ ಜೊತೆ ಸೇರಿ ಪತಿಗೆ ಸುಪಾರಿ ಕೊಟ್ಟು ಕೊಲ್ಲಿಸಿದ್ದ ಪತ್ನಿ ಸೇರಿದಂತೆ ಐವರಿಗೆ ರಾಮನಗರ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಭರತ್, ಸುಕನ್ಯಾ, ಅಬ್ದುಲ್ ರಜಾಕ್, ಮಣಿರಾಜು, ವಾಸು ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ. 2015 ಏಪ್ರಿಲ್ 5 ರಂದು ರಾಮನಗರ ತಾಲೂಕಿನ ವಡೇರಹಳ್ಳಿ ಸಮೀಪ ಆಂಧ್ರ ಮೂಲದ ಗಣೇಶ್ ಎಂಬಾತನನ್ನು ಕತ್ತು ಕೂಯ್ದು ಕೊಲೆ ಮಾಡಲಾಗಿತ್ತು.
ಈ ಪ್ರಕರಣವನ್ನು ರಾಮನಗರ ಗ್ರಾಮಾಂತರ ಪೊಲೀಸರ ದಾಖಲಿಸಿಕೊಂಡಿದ್ದು, ಮೃತನ ಪತ್ನಿ ಸುಕನ್ಯಾ ಸೇರಿದಂತೆ 7 ಜನರನ್ನು ಬಂಧಿಸಿದ್ದರು. ಮೃತನ ಪತ್ನಿ ಸುಕನ್ಯಾ ತನ್ನ ಪ್ರಿಯಕರ ಭರತ್ ಜೊತೆ ಸೇರಿ 5 ಲಕ್ಷ ರೂಪಾಯಿಗೆ ಪತಿಯನ್ನ ಕೊಲ್ಲಲು ಸುಪಾರಿ ನೀಡಿದ್ದಳು.
ಸುಪಾರಿ ಪಡೆದ ಹಂತಕರು ನರ್ಸರಿ ಗಿಡ ಖರೀದಿ ನೆಪದಲ್ಲಿ ಗಣೇಶ್ ನನ್ನ ಕರೆಸಿಕೊಂಡು ಕೊಲೆ ಮಾಡಿದ್ದರು. ಅಂದು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಆಗಿದ್ದ ಅನಿಲ್ ಕುಮಾರ್ ಕೊಲೆ ಆರೋಪಿಗಳನ್ನು ಆಂಧ್ರದ ಕುಪ್ಪಂನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇಂದು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗೋಪಾಲಕೃಷ್ಣ ರೈ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.