ರಾಮನಗರ: ಅರಣ್ಯದಲ್ಲಿ ಕಾಡು ಪ್ರಾಣಿ ಬೇಟೆಯಾಡುವ ವೇಳೆ ನಾಡಬಂದೂಕಿನಿಂದ ರಿವರ್ಸ್ ಫೈರಿಂಗ್ ಆದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಕನಕಪುರ ತಾಲೂಕಿನ ಸಾತನೂರು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಕನಕಪುರ ತಾಲೂಕಿನ ಟಿ.ಬೇಕುಪ್ಪೆ ನಿವಾಸಿ ರವೀಶ್ ಮೃತ ದುರ್ದೈವಿ. ಕನಕಪುರ ತಾಲೂಕಿನ ಸಾತನೂರು ಅರಣ್ಯ ಪ್ರದೇಶದಲ್ಲಿ ರವೀಶ್ ಹಾಗೂ ಕೆಲವು ಬೇಟೆಗಾರರು ರಾತ್ರಿ ಬೇಟೆಯಾಡಲು ತೆರಳಿದ್ದರು. ಬೇಟೆಯ ವೇಳೆ ನಾಡಬಂದೂಕಿನಲ್ಲಿ ರಿವರ್ಸ್ ಫೈರಿಂಗ್ ಆಗಿದ್ದು ರವೀಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
Advertisement
Advertisement
ರವೀಶ್ ಮೃತದೇಹವನ್ನು ಚನ್ನಪಟ್ಟಣ ತಾಲೂಕಿನ ಬುಕ್ಕಸಾಗರ ಗ್ರಾಮದ ರಸ್ತೆ ಬಳಿ ಇಟ್ಟು ಅಪಘಾತ ಎಂದು ಬಿಂಬಿಸಲು ಸಂಗಡಿಗರು ಮುಂದಾಗಿದ್ದರು. ಆದರೆ ಸಮೀಪದಲ್ಲೇ ಶನೀಶ್ವರ ದೇವಾಲಯದಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿತ್ತು. ರಸ್ತೆಯಲ್ಲಿ ಜನರು ಇರುವುದನ್ನು ಕಂಡ ಸಾರ್ವಜನಿಕರು ಸ್ಥಳಕ್ಕೆ ಬಂದಿದ್ದಾರೆ. ಸಾರ್ವಜನಿಕರನ್ನು ಕಂಡು ಬೇಟೆಗಾರರು ಮೃತದೇಹ ಬಿಟ್ಟು ಓಡಿ ಹೋಗಿದ್ದಾರೆ.
Advertisement
ಈ ಸಂಬಂಧ ಚನ್ನಪಟ್ಟಣದ ಅಕ್ಕೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಕನಕಪುರ ಗ್ರಾಮಾಂತರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು ಮೃತ ರವೀಶ್ ಜೊತೆಗಿದ್ದ ಬೇಟೆಗಾರರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿದೆ.