ರಾಮನಗರ: ಹೊಸದಾಗಿ ಸಿಸ್ಟಂ ತರಲಿಕ್ಕೆ ಯಾರು ಇವರಿಗೆ ಪವರ್ ಕೊಟ್ಟಿದ್ದಾರೆ. ಗೃಹಸಚಿವರು ಇಂತಹ ಅಧಿಕಾರಿಗಳ ಉದ್ಧಟತನವನ್ನು ಸರಿಪಡಿಸಿಕೊಳ್ಳದಿದ್ದರೆ ಧೂಳಿಪಟವಾಗಿ ಹೋಗುತ್ತೀರಾ ಎಂದು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ವಿರುದ್ಧ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಕಿಡಿಕಾರಿದ್ದಾರೆ.
ಚನ್ನಪಟ್ಟಣದ ಸರ್ಕಾರಿ ಪದವಿ ಕಾಲೇಜು ಆವರಣದ ಶತಮಾನೋತ್ಸವ ಭವನದಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಭಾಗವಹಿಸಿದ್ದರು. ಇದೇ ವೇಳೆ ಮಾತನಾಡಿದ ಅವರು ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನೀಡದ ವಿಚಾರವಾಗಿ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ವಿರುದ್ಧ ವಾಗ್ದಾಳಿ ನಡೆಸಿದರು.
ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನಾ ಹಕ್ಕುಗಳನ್ನು ಕಿತ್ತುಕೊಳ್ಳುವ ಅನಾಗರಿಕ ವರ್ತನೆ ಇದು. ಪೊಲೀಸ್ ಕಮಿಷನರ್ ಇರುವುದು ಯಾಕೆ? ಪ್ರತಿಭಟನೆ ಇರಲಿ, ಸರ್ಕಾರದ ಗಮನ ಸೆಳೆಯುವವರು ಬೀದಿಗೆ ಬಂದಾಗ ಅವರಿಗೆ ರಕ್ಷಣೆ ಕೊಡುವುದು ಇವರ ಕೆಲಸ. ಪ್ರತಿಭಟನೆಯೇ ಮಾಡಬಾರದು ಎಂದು ಇಂತಹ ಕ್ರಮ ತೆಗೆದುಕೊಳ್ಳುವುದನು ಸರ್ಕಾರದ ಮುಖ್ಯಸ್ಥರು ಗಮನಿಸಬೇಕು ಎಂದು ತಿಳಿಸಿದರು.
ಬಿಸಿಯೂಟದ ಯೋಜನೆ ಖಾಸಗೀಕರಣ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಇದು ಯಾರೋ ನಾಲ್ಕು ಜನ ದುಡ್ಡು ತಿನ್ನೋಕೆ ಅಷ್ಟೇ. ಜನರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಯಾರೋ ಮಧ್ಯವರ್ತಿ ದುಡ್ಡು ತಿನ್ನೋಕೆ ಅವಕಾಶ ಮಾಡಿಕೊಡಬಾರದು. ಈ ಐಡಿಯಾ ಕೊಟ್ಟೋರು ಯಾರು ಇವರಿಗೆ ಎಂದು ಪ್ರಶ್ನಿಸಿದರು.
ಇದೇ ವೇಳೆ ಕೇಂದ್ರದಿಂದ ಕರ್ನಾಟಕದ ತೆರಿಗೆ ಪಾಲು ಕಡಿತಗೊಳಿಸಿರುವ ವಿಚಾರವಾಗಿ ಮಾತನಾಡಿದ ಅವರು, ರಾಜ್ಯವನ್ನು ದೇವರೇ ಕಾಪಾಡಬೇಕು. ಈ ಬಾರಿ ರಾಜ್ಯಕ್ಕೆ 9 ರಿಂದ 11 ಸಾವಿರ ಕೋಟಿ ರೂ. ಖೋತಾ ಮಾಡಿದ್ದಾರೆ. 30 ಸಾವಿರ ಕೋಟಿ ರೂ. ಯೋಜನೆಗಳ ಅನುದಾನವನ್ನು ಕಡಿತ ಮಾಡಿದ್ದಾರೆ. ರಾಜ್ಯ ಸರ್ಕಾರದಲ್ಲಿ ಮಂತ್ರಿ ಮಂಡಲ ರಚನೆ ಮಾಡುವುದೇ ದುಸ್ಸಾಹಸವಾಗಿದ್ದು, ಈ ಪುಣ್ಯಾತ್ಮರು ಅದನ್ನೇ ನೋಡುತ್ತಾರೋ. ರಾಜ್ಯದ ಅಭಿವೃದ್ಧಿ ಬಗ್ಗೆ ನೋಡುತ್ತಾರೋ ಆ ದೇವರೇ ಕಾಪಾಡಬೇಕು ಎಂದು ವ್ಯಂಗ್ಯವಾಡಿದರು.
ಬಿಜೆಪಿ ಸರ್ಕಾರ ತಂದು ಮಂತ್ರಿ ಸ್ಥಾನಕ್ಕಾಗಿ ಇದೀಗ ಜಿದ್ದಿಗೆ ಬಿದ್ದಿರುವ ಶಾಸಕರು ಕಷ್ಟಪಟ್ಟಿದ್ದಾರೆ. ಅದು ಅವರ ಹಣೆ ಬರಹವಾಗಿದ್ದು, ಮಂತ್ರಿಗಳಾಗೋದು, ಬಿಡೋದು ನನಗೆ ಸಂಬಂಧವಿಲ್ಲ ಎಂದರು.