ರಾಮನಗರ: ಜಮೀನಿನ ಮಾಲೀಕರು ಬದುಕಿದ್ದರೂ ಸಾವನ್ನಪ್ಪಿದ್ದಾರೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನನ್ನು ಮಾರಾಟ ಮಾಡಿರುವ ಘಟನೆ ರಾಮನಗರ ತಾಲೂಕಿನ ಭೈರಮಂಗಲದಲ್ಲಿ ನಡೆದಿದೆ.
ಭೈರಮಂಗಲ ಗ್ರಾಮದ ಸಹೋದರರಾದ ಬಿಳಿಗಿರಿಯಪ್ಪ ಹಾಗೂ ಸ್ವಾಮಿ ವಂಚನೆಗೆ ಒಳಗಾದ ಮಾಲೀಕರು. ಅದೇ ಗ್ರಾಮದ ರಂಗಪ್ಪ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪಿ. 2001ರಲ್ಲಿ ಜಮೀನು ಮಾರಾಟವಾಗಿದ್ದರೂ ಮಾಲೀಕರಿಗೆ ತಡವಾಗಿ ಗೊತ್ತಾಗಿದೆ.
Advertisement
Advertisement
ಬಿಳಿಗಿರಿಯಪ್ಪ ಹಾಗೂ ಸ್ವಾಮಿ ಅವರಿಗೆ ಸೇರಿದ್ದ 22 ಗುಂಟೆ ಜಮೀನನ್ನು ರಂಗಪ್ಪ ಮಾರಾಟ ಮಾಡಲು ಯತ್ನಿಸಿದ್ದ. ಈ ನಿಟ್ಟಿನಲ್ಲಿ ಆರೋಪಿ ರಂಗಪ್ಪ ಜಮೀನಿನ ಮಾಲೀಕರು ಮೃತಪಟ್ಟಿದ್ದಾರೆ ಎಂದು 2001ರಲ್ಲಿ ನಾಡ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರವನ್ನು ಪಡೆದಿದ್ದ. ಬಳಿಕ ಜಮೀನನ್ನು ಮಾರಾಟ ಮಾಡಿದ್ದಾನೆ.
Advertisement
ಸಹೋದರರು ಇತ್ತೀಚೆಗೆ ಜಮೀನಿನ ಬಗ್ಗೆ ದಾಖಲೆಗಳನ್ನು ಪಡೆಯಲು ತೆರಳಿದ್ದಾಗ ಜಮೀನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ನ್ಯಾಯಾಲಯದಲ್ಲೂ ಮೊಕದ್ದಮೆ ಹೂಡಿದ್ದು ಶುಕ್ರವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಹಣದಾಸೆಗೆ ಬದುಕಿರುವವರನ್ನೇ ಸತ್ತಿದ್ದಾರೆಂದು ಮರಣ ಪ್ರಮಾಣ ಪತ್ರ ನೀಡಿ ಜಮೀನು ಮಾರಾಟಕ್ಕೆ ಸಾಥ್ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.