– ಸರ್ಕಾರ ಸಾರ್ವಜನಿಕರ ಹಿತಕಾಯುವ ಕೆಲಸ ಮಾಡುತ್ತಿದೆ
ರಾಮನಗರ: ಸೋಶಿಯಲ್ ಮೀಡಿಯಾ, ಮಾಧ್ಯಮದಲ್ಲಿ ಮಿಂಚಲು ಗುಂಪು ಗುಂಪಾಗಿ ಸೇರಬೇಡಿ. ದೇಣಿಗೆ ಮತ್ತೊಂದು ಮಗದೊಂದು ಅಂತೇಳಿ ಬೀದಿಗೆ ಬರಬೇಡಿ. ಬಂದು ವ್ಯವಸ್ಥೆಯನ್ನು ಅವ್ಯವಸ್ಥೆ ಮಾಡಬೇಡಿ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಇಂದು ನಗರದಲ್ಲಿ ಮಾತನಾಡಿದ ಅವರು, ಸಾರ್ವಜನಿಕರೇ ನಿಮ್ಮ ಬದುಕು, ನಿಮ್ಮ ಜೀವ ನಿಮ್ಮ ಕೈನಲ್ಲಿಯೇ ಇದೆ. ನೀವು ಮನೆಯಲ್ಲಿಯೇ ಉಳಿದುಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಅಲ್ಲದೇ ಯಾರೂ ಹೊರಗೆ ಬರಬೇಡಿ ಅಂದರೂ ಹೊರಗೆ ಬರುತ್ತಿದ್ದಾರೆ ದೇಣಿಗೆ, ಮಾನವೀಯತೆ ಅಂತೇಳಿ ಓಡಾಡುತ್ತಿದ್ದಾರೆ. ಸಾರ್ವಜನಿಕರ ಹಿತಕಾಯುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು.
Advertisement
Advertisement
ಸರ್ಕಾರಿ ಅಧಿಕಾರಿಗಳಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಿ. ಅದನ್ನ ಬಿಟ್ಟು ದೇಣಿಗೆ ಸಂಗ್ರಹ ಅಂತೆಲ್ಲ ಓಡಾಡಬೇಡಿ, ಸರ್ಕಾರವಿದೆ ಏನೇ ಸಹಾಯ ಮಾಡುವುದಿದ್ದರು ಸರ್ಕಾರ, ಜಿಲ್ಲಾಡಳಿತಕ್ಕೆ ನೀಡಿ ಅದನ್ನು ಬಡವರು ನಿರ್ಗತಿಕರಿಗೆ ತಲುಪಿಸುವ ವ್ಯವಸ್ಥೆ ಆಗುತ್ತೆ. ಹೋಂ ಕ್ವಾರಂಟೈನ್‍ನಲ್ಲಿ ಇರುವವರನ್ನು ಕೇವಲ 14 ದಿನಕ್ಕೆ ಹೊರಗೆ ಬಿಡಬೇಡಿ. ಅಮೆರಿಕದಲ್ಲಿ 14 ದಿನಗಳ ಬಳಿಕವೇ ಸಾಕಷ್ಟು ಪ್ರಕರಣಗಳು ದೃಢಪಟ್ಟಿವೆ ಎಂದು ತಿಳಿಸಿದರು.
Advertisement
Advertisement
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೊರೊನಾಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ಪ್ರತಿ ದಿನ ಆಟೋ ಮೂಲಕ ಪ್ರಚಾರ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರು ಬೆಳೆದಂತಹ ರೇಷ್ಮೆಯನ್ನು ರೀಲರ್‍ಗಳು ಖರೀದಿಸುತ್ತಿಲ್ಲ. ಇದರಿಂದ ರೇಷ್ಮೆ ಬೆಳೆಗಾರರಿಗೆ ತೊಂದರೆಯಾಗುತ್ತಿದೆ. ರೇಷ್ಮೆ ಮಾರುಕಟ್ಟೆಯು ಬಂದ್ ಆಗಿದೆ. ಹೀಗಾಗಿ ರಾಜ್ಯ ಸರ್ಕಾರ ರೈತರ ನಷ್ಟ ತುಂಬಿಕೊಡಬೇಕು ಎಂದು ಬೇಡಿಕೆ ಸಲ್ಲಿಸಿದರು.
ಗ್ರಾಮಗಳಲ್ಲಿ ಶುದ್ಧಕುಡಿಯುವ ನೀರಿನ ಘಟಕಗಳ ಬಳಿಯೇ ಹೆಚ್ಚಿನ ಜನ ಸೇರುತ್ತಾರೆ. ಹೀಗಾಗಿ ಅಲ್ಲಿಗೆ ಒಬ್ಬ ಸಿಬ್ಬಂದಿ ನೇಮಿಸಬೇಕು. ನೀರಿನ ಕಾರ್ಖಾನೆಗಳ ಮೂಲಕವೇ ನೀರು ಪೂರೈಸಲು ಸೂಚನೆ ನೀಡಬೇಕು. ಇಂದಿರಾ ಕ್ಯಾಂಟಿನ್ ಮೂಲಕ ದಿನಕ್ಕೆ ಕನಿಷ್ಟ 500 ಪ್ಯಾಕೆಟ್ ಆಹಾರಗಳನ್ನು ಸಿದ್ಧಪಡಿಸಿ, ನಿರ್ಗತಿಕರಿಗೆ ನೀಡಬೇಕು. ಇಷ್ಟು ಮಾತ್ರವಲ್ಲದೇ ಜಿಲ್ಲಾಡಳಿತವು ಇರುವ ಅನುದಾನದಲ್ಲಿ ಶೇ.10ರಷ್ಟು ಮಾತ್ರವೇ ಆರೋಗ್ಯಕ್ಕೆ ಖರ್ಚು ಮಾಡಬೇಕು ಎಂಬ ಸರ್ಕಾರ ನಿಯಮ ಸರಿ ಇಲ್ಲ. ಇದನ್ನು ಸಡಿಲಿಸಬೇಕು ಎಂದು ಅಗ್ರಹಿಸಿದರು.
ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೈಸರ್ ನೀಡಬೇಕು. ಸರ್ಕಾರದಿಂದಲೇ ಉಚಿತವಾಗಿ ಮಾಸ್ಕ್ ಗಳನ್ನು ನೀಡುವ ಕೆಲಸವಾಗಬೇಕು. ಗ್ರಾಮಗಳಲ್ಲಿ ಟೈಂಪಾಸ್ ಮಾಡುವವರಿಗೆ ಸಾಕಷ್ಟು ಅರಿವು ಮೂಡಿಸಬೇಕು ಎಂದು ಮನವಿ ಸಲ್ಲಿಸಿದರು.