ರಾಮನಗರ: ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯ ಆದೇಶ ಇಂದು ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ತಾಯಿ, ಸೋದರಿ ಮತ್ತು ಬೆಂಬಲಿಗರು ಡಿಕೆಶಿಯವರ ಮನೆದೇವತೆ ಕೆಂಕೇರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕನಕಪುರದ ಸಂಗಮ ರಸ್ತೆಯಲ್ಲಿನ ಕೆಂಕೇರಮ್ಮ ದೇವಾಲಯದಲ್ಲಿ ಜೈಲಿನಲ್ಲಿರುವ ಡಿಕೆಶಿಗೆ ಜಾಮೀನು ಸಿಗಲೆಂದು ವಿಶೇಷ ಪೂಜೆ ಸಲ್ಲಿಸಿದರು. ಜಾಮೀನು ಸಿಕ್ಕು ಜೈಲಿನಿಂದ ಹೊರಬರಲಿ ಹಾಗೂ ಕಾನೂನಾತ್ಮಕ ಹೋರಾಟದಲ್ಲಿ ಜಯ ಸಿಗಲೆಂದು ಜೆಡಿಎಸ್ ಕಾರ್ಯಕರ್ತರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಡಿಕೆಶಿ ಅಭಿಮಾನಿಗಳು ದೇವರಲ್ಲಿ ಬೇಡಿಕೊಂಡಿದ್ದಾರೆ.
ವಿಶೇಷವಾಗಿ ಪೂಜಾ ಕಾರ್ಯಕ್ರಮದಲ್ಲಿ ಡಿಕೆಶಿ ತಾಯಿ ಗೌರಮ್ಮ ಹಾಗೂ ಸೋದರಿ ಮಂಜುಳಾ ಸಹ ಭಾಗಿಯಾಗಿದರು. ತಮ್ಮ ಮನೆಮಗ ಡಿಕೆ ಶಿವಕುಮಾರ್‍ಗೆ ನಾಳೆ ಜಾಮೀನು ಸಿಕ್ಕು ಹೊರಬರಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಇನ್ನೂ ಕಾರ್ಯಕರ್ತರು ದೇವಾಲಯದ ಬಳಿ ಡಿಕೆಶಿಗೆ ಜಾಮೀನು ಸಿಗಲೆಂದು 101 ಈಡುಗಾಯಿ ಸೇವೆಯನ್ನು ಸಲ್ಲಿಸಿದರು.