ರಾಮನಗರ: ರಾಮನಗರ ಜಿಲ್ಲೆಯಲ್ಲಿ ನಡೆದ 6ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಾಕಷ್ಟು ಅವ್ಯವಸ್ಥೆ ಹಾಗೂ ಗೊಂದಲ, ಮಾತಿನ ಚಕಮಕಿಗೆ ಕಾರಣವಾಗಿತ್ತು. ಅದರಲ್ಲೂ ಚಿಕ್ಕ ಸಭಾಂಗಣದಲ್ಲಿ ನಡೆದ ಸಮ್ಮೇಳನ ಅವ್ಯವಸ್ಥೆಯನ್ನೇ ಎದ್ದು ಕಾಣುವಂತೆ ಮಾಡಿತ್ತು. ಒಂದೆಡೆ ರೈತ ಗೀತೆಗೆ ಗೌರವ ಕೊಡಲಿಲ್ಲ ಎಂಬ ರೈತರ ಆಕ್ರೋಶ, ಮತ್ತೊಂದೆಡೆ ವಿದ್ಯಾರ್ಥಿಗಳು ಆಸನದ ವ್ಯವಸ್ಥೆಯಿಲ್ಲದೇ ಮೂಟೆಗಳಂತ ಬ್ಯಾಗ್‍ಗಳನ್ನು ಹೊತ್ತು ನಿಂತಿದ್ದು ಅವ್ಯವಸ್ಥೆಯನ್ನ ಎತ್ತು ತೋರಿಸುತ್ತಿತ್ತು.
ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ರಾಷ್ಟ್ರಗೀತೆ ಹಾಗೂ ನಾಡಗೀತೆಯ ಬಳಿಕ ರೈತಗೀತೆಯನ್ನ ಗಾಯಕರು ಹಾಡಿದರು. ಈ ವೇಳೆ ವೇದಿಕೆ ಮೇಲೆ ಹಾಗೂ ವೇದಿಕೆ ಮುಂಭಾಗದಲ್ಲಿದ್ದವರು ತಮ್ಮ ತಮ್ಮ ಆಸನದಲ್ಲಿ ಕುಳಿತುಕೊಂಡರು. ಇದರಿಂದ ಕೆರಳಿದ ರೈತ ಮುಖಂಡರು ಹಾಗೂ ರೈತರು ರೈತಗೀತೆಗೆ ಗೌರವ ನೀಡಿಲ್ಲ. ಎದ್ದು ನಿಂತಿಲ್ಲ ಎಂದು ಆರೋಪಿಸಿ, ರೈತ ಸಂಘದ ಕೆಲ ಮುಖಂಡರು ವೇದಿಕೆ ಏರಲು ಮುಂದಾದರು.
Advertisement
Advertisement
ಕಾರ್ಯಕ್ರಮದ ಆರಂಭದಲ್ಲೇ ರೈತಗೀತೆ ವಿಚಾರವಾಗಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸಮ್ಮೇಳನಕ್ಕೆ ರೈತರನ್ನು ಆಹ್ವಾನಿಸಿ ರೈತ ಪರ ಚರ್ಚೆಗೂ ವೇದಿಕೆ ನೀಡಿ ರೈತ ಗೀತೆಗೆ ಅವಮಾನ ಮಾಡುವುದು ಯಾವ ನ್ಯಾಯ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಸಾಹಿತ್ಯ ಪರಿಷತ್ತಿನ ಕೆಲ ಮುಖಂಡರು ಸಮಾಧಾನ ಪಡಿಸಿದರು.
Advertisement
ಜಿಲ್ಲಾ ಸಾಹಿತ್ಯ ಸಮ್ಮೇಳನವಾಗಿದ್ದರಿಂದ ನಗರದ ಬಹುತೇಕ ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಸಮ್ಮೇಳನಕ್ಕೆ ಕರೆತರಲಾಗಿತ್ತು. 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮ್ಮೇಳನಕ್ಕೆ ಆಗಮಿಸಿದ್ದು ಆಸನಗಳೇ ಇಲ್ಲದೇ ಪರದಾಡುವಂತಾಗಿತ್ತು. ಕಾಲೇಜಿಗೆ ಬಂದ ವಿದ್ಯಾರ್ಥಿಗಳು ನೇರವಾಗಿ ಸಮ್ಮೇಳನಕ್ಕೆ ಬಂದಿದ್ದು ಕಿರಿದಾದ ಕಲ್ಯಾಣ ಮಂಟಪದಲ್ಲಿ ಜಾಗವೇ ಇಲ್ಲದಂತಾಗಿತ್ತು. ಅಷ್ಟೇ ಅಲ್ಲದೆ ಆಸನ ವ್ಯವಸ್ಥೆಗಳಿಲ್ಲದೇ ಪರದಾಡುವಂತಾಗಿತ್ತು. ಬಾಲ್ಕನಿ ಹಾಗೂ ವೇದಿಕೆ ಮುಂಭಾಗದ ಇಕ್ಕೆಲಗಳಲ್ಲಿ ನಿಂತು ನಿಂತು ಕಾಲ ನೋವಿಗೆ ಒಳಗಾದವರು ನೆಲದ ಮೇಲೆಯೇ ಕುಳಿತು ಸಮ್ಮೇಳನ ವೀಕ್ಷಿಸುವಂತಾಗಿತ್ತು.