Connect with us

Districts

48 ಗಂಟೆಗಳಲ್ಲಿ ನಿರ್ಮಾಣವಾಗ್ತಿದೆ 100 ಬೆಡ್‍ಗಳ ಕೊರೊನಾ ಪ್ರತ್ಯೇಕ ವಾರ್ಡ್

Published

on

ರಾಮನಗರ: ಮಹಾಮಾರಿ ಕೊರೊನಾ ಭೀತಿಯಿಂದಾಗಿ ಪಾಳುಬಿದ್ದ ಕಟ್ಟಡವಾಗಿದ್ದ ರಾಮನಗರದ ಕಂದಾಯ ಭವನದ ಕಟ್ಟಡ ಇದೀಗ 48 ಗಂಟೆಗಳಲ್ಲಿ 100 ಬೆಡ್ ಗಳ ಮೇಕ್ ಶಿಫ್ಟ್ ಆಸ್ಪತ್ರೆಯಾಗಿ ಸಿದ್ದಗೊಳ್ಳುತ್ತಿದೆ.

ಕೊರೊನಾ ವ್ಯಾಪಕವಾಗಿ ಹರಡಿದರೆ ಸೋಂಕಿತರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಕಂದಾಯ ಭವನದಲ್ಲಿ ಒಟ್ಟು 100 ಹಾಸಿಗೆಗಳನ್ನು ಹಾಕಿ ತುರ್ತು ಸೇವೆಗಳನ್ನು ನೀಡಲು ಆರೋಗ್ಯ ಇಲಾಖೆ ಶ್ರಮಿಸುತ್ತಿದೆ. ಪಾಳುಬಿದ್ದ ಕಟ್ಟಡದಂತ್ತಾಗಿದ್ದ ಕಂದಾಯ ಭವನ ಇದೀಗ ಸ್ವಚ್ಛಗೊಂಡಿದ್ದು, 100 ಹಾಸಿಗೆಗಳನ್ನು ಹಾಕಲಾಗುತ್ತಿದೆ. ಅಲ್ಲದೇ ಐಸಿಯು ಹಾಗೂ ವೆಂಟಿಲೇಟರ್ ಗಳನ್ನೂ ಕೂಡಾ ಅಳವಡಿಸಲು ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ಕಂದಾಯ ಭವನವನ್ನು ರಾಜೀವ್ ಗಾಂಧಿ ಆರೋಗ್ಯ ವಿವಿಗಾಗಿ ಮೀಸಲಿಡಲಾಗಿದೆ. ಆಡಳಿತ ಕಚೇರಿಗೆ ಮೀಸಲಿಟ್ಟಿದ್ದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಚೇರಿ ಇನ್ನೂ ಸ್ಥಳಾಂತರವಾಗಿಲ್ಲ. ರಾಮನಗರದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿದರೆ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಮತ್ತು ಕ್ವಾರಂಟೈನ್ ಹಾಗೂ ಐಸೋಲೇಷ್‍ಗಳಾಗಿ ಬಳಸಿಕೊಳ್ಳಲು ಕಂದಾಯ ಭವನವನ್ನು ಆಸ್ಪತ್ರೆಯಾಗಿ ಮಾಡಲಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಕೇವಲ 50 ಹಾಸಿಗೆ ಸಾಮರ್ಥ್ಯ ಮಾತ್ರವೇ ಹೊಂದಿದ್ದು, ಇನ್ನು 250 ಹಾಸಿಗೆಗಳ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ತಾತ್ಕಲಿಕವಾಗಿ ಕಂದಾಯ ಭವನದಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಿಸಿ, ಏಕಕಾಲದಲ್ಲಿ ನೂರು ಮಂದಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ನಡೆಯುತ್ತಿದೆ. ಈ ಸಂಬಂಧ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಸಹ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಇಷ್ಟು ಮಾತ್ರವಲ್ಲದೇ, ಜಿಲ್ಲೆಯಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆಯು ಸೇರಿ, 1 ಸಾವಿರ ಹಾಸಿಗೆಯ ಚಿಕಿತ್ಸೆ ಕೇಂದ್ರ ಸಿದ್ಧಗೊಳ್ಳಲಿದೆ. ಆದರೆ ಇಷ್ಟು ಮಂದಿಗೆ ಚಿಕಿತ್ಸೆ ನೀಡಿಲು ವೈದ್ಯಕೀಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ತುರ್ತು ಸಂದರ್ಭಗಳಲ್ಲಿ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು, ನರ್ಸ್‍ಗಳು, ಜಿಲ್ಲೆಯಲ್ಲಿ ತರಬೇತಿ ಪಡೆಯುತ್ತಿರುವವರನ್ನು ವೈದ್ಯಕೀಯ ಸೇವೆಗೆ ನಿಯೋಜನೆ ಮಾಡಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.

Click to comment

Leave a Reply

Your email address will not be published. Required fields are marked *