ಬೆಂಗಳೂರು: ರಾಮನಗರದ ರಾಜಕೀಯ ವಾತಾವರಣ ಕ್ಷಣಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ವಿಧಾನ ಪರಿಷತ್ ಸದಸ್ಯ, ರಾಮನಗರ ಕಾಂಗ್ರೆಸ್ ಮುಖಂಡ ಸಿಎಂ ಲಿಂಗಪ್ಪ ಪುತ್ರ ಚಂದ್ರಶೇಖರ್ ಪಕ್ಷ ತೊರೆದು ಬಿಎಸ್‍ವೈ ನಿವಾಸದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಎಸ್ ಯಡಿಯೂರಪ್ಪ ಅವರು ಪಕ್ಷ ಧ್ವಜ ನೀಡುವ ಮೂಲಕ ಚಂದ್ರಶೇಖರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.
Advertisement
ಈ ವೇಳೆ ಮಾತನಾಡಿದ ಬಿಎಸ್‍ವೈ ಅವರು, ರಾಮನಗರ ಪಕ್ಷದ ಅಭ್ಯರ್ಥಿ ಎಂದು ಅವರು ಪಕ್ಷಕ್ಕೆ ಸೇರ್ಪಡೆ ಆಗಿಲ್ಲ. 2 ದಿನಗಳಲ್ಲಿ ರಾಮನಗರದಲ್ಲಿ ಬೃಹತ್ ಸಮಾರಂಭದ ನಡೆಸಿ ಅಭ್ಯರ್ಥಿ ಘೋಷಣೆ ಮಾಡಲಾಗುವುದು. ಇನ್ನು ಹಲವರು ಪಕ್ಷ ಸೇರ್ಪಡೆಯಾಗುತ್ತಾರೆ ಎಂದು ಹೇಳಿದರು. ಚಂದ್ರಶೇಖರ್ ಬಿಜೆಪಿ ಸೇರ್ಪಡೆ ವೇಳೆ ಸಿಪಿ ಯೋಗಿಶ್ವರ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
Advertisement
Advertisement
ಬಿಜೆಪಿ ಸೇರ್ಪಡೆಯಾಗಿ ಮಾತನಾಡಿದ ಚಂದ್ರಶೇಖರ್, ನನ್ನ ಆತ್ಮತೃಪ್ತಿಗಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಕಾಂಗ್ರೆಸ್ ನಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ. ನಮ್ಮ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಮಾಡುವುದು ನನ್ನ ಗುರಿಯಾಗಿದೆ. ನನ್ನೊಂದಿಗೆ ಕ್ಷೇತ್ರ ಹಲವು ಮುಖಂಡರು ಕೂಡ ಸೇರ್ಪಡೆಯಾಗುತ್ತಾರೆ. ಬಿಜೆಪಿ ಪಕ್ಷವನ್ನು ಕ್ಷೇತ್ರದಲ್ಲಿ ಬಲಗೊಳಿಸುವತ್ತ ಗಮನ ಹರಿಸುತ್ತೇನೆ ಎಂದರು.
Advertisement
ಇದಕ್ಕೂ ಮುನ್ನ ಪಬ್ಲಿಕ್ ಟಿವಿ ಜೊತೆ ಮಾತಾಡಿದ ಸಿ.ಎಂ ಲಿಂಗಪ್ಪ, ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಇಲ್ಲ. ಹಾಗಂತ ನಾವು ಬಿಜೆಪಿಗೂ ಬೆಂಬಲ ನೀಡಲ್ಲ. ಬಂಡಾಯ ಅಭ್ಯರ್ಥಿ ಕಣಕ್ಕಿಳಿಸಲು ಚಿಂತನೆ ನಡೆಸುತ್ತೇವೆ ಎಂದು ಹೇಳಿದ್ದರು. ಆದರೆ ಈ ಎಲ್ಲದರ ನಡುವೆ ಚಂದ್ರಶೇಖರ್ ಬಿಜೆಪಿಗೆ ಸೇರ್ಪಡೆಯಾಗಿ ಮತ್ತೆ ಟ್ವಿಸ್ಟ್ ನೀಡಿದ್ದಾರೆ.
ರಾಮನಗರ ಉಪಚುನಾವಣೆಯಲ್ಲಿ ಬಿಜೆಪಿಗೆ ನಾವು ಬೆಂಬಲ ನೀಡುವುದಿಲ್ಲ. ಇತ್ತ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ. ಬಂಡಾಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಆಲೋಚನೆಯನ್ನು ಕೈಬಿಟ್ಟಿಲ್ಲ ಎಂದು ಹೇಳಿ ರಾಮನಗರ ಮೈತ್ರಿಗೆ ಸಿ.ಎಂ.ಲಿಂಗಪ್ಪ ವಿರೋಧ ವ್ಯಕ್ತಪಡಿಸಿದ್ದರು.
ಬಿಜೆಪಿಯವರ ನೀತಿ ನಿಯಮಗಳೇ ಬೇರೆ. ನಮಗೆ ಅದು ಹೊಂದಾಣಿಕೆ ಆಗುವುದಿಲ್ಲ. ಹೀಗಾಗಿ ಅವರಿಗೆ ಬೆಂಬಲ ನೀಡುವುದಿಲ್ಲ. ಅಷ್ಟೇ ಅಲ್ಲದೆ ಇಲ್ಲಿಯವರೆಗೂ ಬಿಜೆಪಿಯ ಯಾವುದೇ ನಾಯಕರೂ ನಮ್ಮನ್ನು ಸಂಪರ್ಕಿಸಿಲ್ಲ. ಒಂದು ವೇಳೆ ಸಂಪರ್ಕಕ್ಕೆ ಪ್ರಯತ್ನಿಸಿದರೂ ನಿರ್ಧಾರವನ್ನು ಬದಲಿಸುವುದಿಲ್ಲ. ನಾವು ಸ್ಥಳೀಯವಾಗಿ ಪರಿಸ್ಥಿತಿ ನೋಡಬೇಕಿದೆ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಮಾತನಾಡಿದ್ದಾರೆ. ಒಂದು ವೇಳೆ ರಾಮನಗರ ಕ್ಷೇತ್ರವನ್ನು ಸಂಪೂರ್ಣವಾಗಿ ಜೆಡಿಎಸ್‍ಗೆ ಬಿಟ್ಟುಕೊಟ್ಟರೆ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಆಲೋಚನೆ ಮಾಡಿರುವೆ ಎಂದು ಸಿ.ಎಂ.ಲಿಂಗಪ್ಪ ಪ್ರತಿಕ್ರಿಯಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv