ರಾಮನಗರ: ಜಿಲ್ಲೆಯಿಂದ ಗೆದ್ದು ಮುಖ್ಯಮಂತ್ರಿ ಜವಾಬ್ದಾರಿ ಹೊತ್ತ ಯಾರೊಬ್ಬರಿಗೂ ಪೂರ್ಣಾವಧಿ ಭಾಗ್ಯ ಸಿಕ್ಕಿಲ್ಲ.
ಜಿಲ್ಲೆಯಿಂದ ಆಯ್ಕೆಯಾದ ಶಾಸಕರ ಪೈಕಿ ಒಟ್ಟು ನಾಲ್ವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದರು. ಅವರಲ್ಲಿ ಯಾರೊಬ್ಬರೂ 5 ವರ್ಷಗಳ ಕಾಲ ಸಿಎಂ ಆಗಿ ಅಧಿಕಾರ ಪೂರ್ಣಗೊಳಿಸಲೇ ಇಲ್ಲ. ಅಷ್ಟೇ ಅಲ್ಲದೆ ಎರಡು ಬಾರಿ ಆಯ್ಕೆಯಾದರೂ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರ 5 ವರ್ಷ ಪೂರ್ಣಗೊಳ್ಳುವ ಮುನ್ನವೇ ಪತನಗೊಂಡಿದೆ.
Advertisement
ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯಿಂದ ಆಯ್ಕೆಯಾಗಿ ಸಿಎಂ ಆಗಿದ್ದರು. ಆದರೆ ನಾಲ್ವರಲ್ಲಿ ಒಬ್ಬರೇ ಒಬ್ಬರೂ ಅಧಿಕಾರ ಪೂರ್ಣಗೊಳಿಸಿಲ್ಲ. ಕುಮಾರಸ್ವಾಮಿ ಅವರು ಮೊದಲ ಬಾರಿ 20 ತಿಂಗಳು ಸಿಎಂ ಆಗಿ ಅಧಿಕಾರ ನಡೆಸಿದ್ದರು. 2018ರ ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಜೊತೆಗೆ ಕೈಜೋಡಿಸಿದ್ದ ಸಿಎಂ 14 ತಿಂಗಳಲ್ಲಿ ಅಧಿಕಾರವನ್ನು ಕಳೆದುಕೊಂಡಿದ್ದಾರೆ.
Advertisement
ಕೆಂಗಲ್ ಹನುಮಂತಯ್ಯ ಅವರು 4 ವರ್ಷ 5 ತಿಂಗಳು ಅಧಿಕಾರ ನಡೆಸಿದ್ದರೆ, ರಾಮಕೃಷ್ಣ ಹೆಗಡೆ 12 ತಿಂಗಳು ಅಧಿಕಾರದಲ್ಲಿದ್ದರು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು 17 ತಿಂಗಳ ಬಳಿಕ ಸಿಎಂ ಸ್ಥಾನದಿಂದ ಕೆಳಗೆ ಇಳಿದಿದ್ದರು.